ಮಹಿಳೆ ಕೊಲೆ ಪ್ರಕರಣ: ಸಾಕ್ಷ್ಯಾಧಾರದ ಕೊರತೆ ಕಾರಣಕ್ಕೆ ಜೀವಾವಧಿ ಶಿಕ್ಷೆ ರದ್ದು

ಬೆಂಗಳೂರು: 'ಒಂಟಿ ಮಹಿಳೆಯ ಕೊಲೆ ಮಾಡಿ ಒಡವೆ ದೋಚಿದ್ದ ಆರೋಪದಲ್ಲಿ ಸೆಷನ್ಸ್ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯನ್ನು ಸಾಕ್ಷ್ಯಾಧಾರದ ಕೊರತೆ ಕಾರಣಕ್ಕೆ ಹೈಕೋರ್ಟ್ ಖುಲಾಸೆಗೊಳಿಸಿದೆ.
ಈ ಸಂಬಂಧ ಅಪರಾಧಿ ಕೃಷ್ಣ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯ ಮೂರ್ತಿ ಬಿ.ವೀರಪ್ಪ ಮತ್ತು ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದೆ.
ಈ ಸಂಬಂಧ ಅಪರಾಧಿ ಕೃಷ್ಣ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯ ಮೂರ್ತಿ ಬಿ.ವೀರಪ್ಪ ಮತ್ತು ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದೆ.
ವಿಚಾರಣೆ ವೇಳೆ ಕೃಷ್ಣ ಪರ ವಕೀಲ ಸಿ.ಎಚ್.ಹನುಮಂತರಾಯ ಅವರು, 'ಈ ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷಿದಾರರಿಲ್ಲ. ಗುರುತಿಸಲಾಗಿರುವ ಒಡವೆಗಳು ಮೃತ ಮಹಿಳೆಯದ್ದೇ ಎಂದು ಸೂಚಿಸಲೂ ಯಾವುದೇ ಆಧಾರವಿಲ್ಲ. ಕೇವಲ ಮೃತ ಮಹಿಳೆಯ ಸಂಬಂಧಿಗಳು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಪ್ರಮುಖವಾಗಿ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನಡೆಸಿರುವುದು ಕರ್ನಾಟಕ ಪೊಲೀಸ್ ಕೈಪಿಡಿಯಲ್ಲಿ ಸೂಚಿಸಲಾಗಿರುವ ನಿಯಮಗಳಿಗೆ ವಿರುದ್ಧವಾಗಿದೆ' ಎಂದು ವಾದ ಮಂಡಿಸಿದ್ದರು.
ಈ ವಾದಾಂಶವನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಒಂಬತ್ತು ವರ್ಷ 9 ತಿಂಗಳು 11 ದಿವಸಗಳ ಕಾಲ ಜೈಲಿನಲ್ಲಿದ್ದ ಅಪರಾಧಿಯ ಬಿಡುಗಡೆಗೆ ಆದೇಶಿಸಿದೆ.
ಪ್ರಕರಣವೇನು?: ಕನಕಾಂಬರಂ ಎನ್ನುವ ಮಹಿಳೆಯ ಕೊಲೆ ಪ್ರಕರಣದಲ್ಲಿ ಕೃಷ್ಣ ಎನ್ನುವವರನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದರು. ಕೃಷ್ಣ ಕೊಲೆಯಾಗಿದ್ದ ಕನಕಾಂಬರಂ ಅವರ ಪತಿಯ ಅಣ್ಣನ ಮಗ. ಕನಕಾಂಬರಂ ಅವರ ಪತಿ 2013ಕ್ಕೂ ಮೊದಲೇ ಸುಮಾರು 17 ವರ್ಷಗಳ ಹಿಂದೆ ತೀರಿಕೊಂಡಿದ್ದರು. ಅವರಿಗೆ ಸ್ವಂತ ಮಕ್ಕಳಿಲ್ಲದ ಕಾರಣ ಅಂದಿನಿಂದ ಕೃಷ್ಣ ಮೃತರಿಗಾಗಿ ಒಂದು ಮನೆಯನ್ನು ಭೋಗ್ಯಕ್ಕೆ ಪಡೆದು ಅವರನ್ನು ನೋಡಿಕೊಳ್ಳುತ್ತಿದ್ದರು.
ಕನಕಾಂಬರಂ 2013ರ ಜನವರಿ 21ರಂದು ಮನೆಯಲ್ಲಿ ಒಬ್ಬರೇ ಇದ್ದಾಗ ಅವರನ್ನು ಕೊಲೆ ಮಾಡಿ, ಅವರ ಮೈಮೇಲಿನ ಒಡವೆಗಳನ್ನು ದೋಚಲಾಗಿತ್ತು. ಮೃತ ಮಹಿಳೆಯ ಅಣ್ಣ ಹಾಗೂ ಸಂಬಂಧಿಗಳು, 'ಕೃಷ್ಣ ಒಡವೆಗಾಗಿ ಕೊಲೆ ಮಾಡಿದ್ದಾನೆ' ಎಂದು ದೂರು ನೀಡಿದ್ದರು.
ಈ ದೂರಿನ ಆಧಾರದ ಮೇಲೆ, ಕೃಷ್ಣನನ್ನು ಬಂಧಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ 51ನೇ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
'ಅತ್ಯಾಚಾರ: ವಯಸ್ಸಿನ ದೃಢೀಕರಣಕ್ಕೆ ಶಾಲಾ ದಾಖಲೆ ಮುಖ್ಯ'
ಬೆಂಗಳೂರು: 'ಅತ್ಯಾಚಾರ ಪ್ರಕರಣದ ಸಂತ್ರಸ್ತ ಬಾಲಕಿಯ ವಯಸ್ಸು ನಿರ್ಧರಿಸುವ ವಿಚಾರದಲ್ಲಿ ವೈದ್ಯರು ನೀಡಿದ ವೈದ್ಯಕೀಯ ಅಭಿಪ್ರಾಯಕ್ಕಿಂತ ಶಾಲಾ ಪ್ರಾಧಿಕಾರಗಳು ವಿತರಿಸಿದ ಪ್ರಮಾಣಪತ್ರವೇ ಹೆಚ್ಚು ಪ್ರಾಮುಖ್ಯ ಹೊಂದಿರುತ್ತದೆ' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕ್ರಿಮಿನಲ್ ಮೇಲ್ಮನವಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಎಚ್.ಬಿ. ಪ್ರಭಾಕರ ಶಾಸ್ತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ, 'ವೈದ್ಯಕೀಯ ದಾಖಲೆಗಳಿಗಿಂತ ಶಾಲಾ ಪ್ರಾಧಿಕಾರವು ನೀಡಿರುವ ಪ್ರಮಾಣಪತ್ರವು ಹೆಚ್ಚಿನ ಆದ್ಯತೆ ಹೊಂದಿರುತ್ತದೆ' ಎಂದು ಹೇಳಿದೆ.
'ಘಟನೆ ನಡೆದಾಗ ಸಂತ್ರಸ್ತೆ ವಯಸ್ಕಳಾಗಿದ್ದಳು' ಎಂಬ ಆರೋಪಿಯ ವಾದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಪೀಠ, 'ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಪ್ರಮಾಣಪತ್ರ ಅಥವಾ ಶಾಲೆ, ನಗರ ಪಾಲಿಕೆ, ಪೌರಾಡಳಿತ ಪ್ರಾಧಿಕಾರ ಅಥವಾ ಪಂಚಾಯಿತಿ ನೀಡುವ ಜನನ ಪ್ರಮಾಣಪತ್ರ ಲಭ್ಯವಿಲ್ಲದ ಸಂದರ್ಭದಲ್ಲಿ ಕಾನೂನಿನ ಸಂಘರ್ಷಕ್ಕೆ ಒಳಗಾಗಿರುವ ಅಪ್ರಾಪ್ತ ವಯಸ್ಸಿನವರ ನಿಜವಾದ ವಯಸ್ಸು ಯಾವುದು ಎಂದು ನಿರ್ಧರಿಸಲು ವೈದ್ಯಕೀಯ ಅಭಿಪ್ರಾಯ ಕೋರಲಾಗುತ್ತದೆ. ಆಸ್ಪತ್ರೆಯಲ್ಲಿ ವೈದ್ಯಕೀಯ ದಾಖಲೆಗಳಲ್ಲಿ ಆಕೆ ನಮೂದಿಸಿರುವ ಹೆಸರು ಹಾಗೂ ವಯಸ್ಸನ್ನು ಸತ್ಯ ಎಂಬುದಾಗಿ ಒಪ್ಪಬೇಕಿದೆ' ಎಂದು ತಿಳಿಸಿದೆ