ಮಂಗಳೂರು: ಕುದುರೆ ಸವಾರಿ ಮೂಲಕ ಕರಾವಳಿಗರ ಮನಗೆದ್ದ ಸ್ನೇಹಿತ್‌

ಮಂಗಳೂರು: ಕುದುರೆ ಸವಾರಿ ಮೂಲಕ ಕರಾವಳಿಗರ ಮನಗೆದ್ದ ಸ್ನೇಹಿತ್‌

ಮಂಗಳೂರು: ರಸ್ತೆ, ಜಲ, ವಾಯು ಮಾರ್ಗವನ್ನು ಹೊಂದಿರುವ ಏಕೈಕ ನಗರ ಮಂಗಳೂರು. ಇಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬಹಳ ಸುಲಭವಾಗಿ ಸಂಚಾರ ಮಾಡಬಹುದು. ಇಷ್ಟೆಲ್ಲಾ ಸರಾಗ ಸಂಚಾರ ವ್ಯವಸ್ಥೆಗಳಿದ್ದರೂ, ಇಲ್ಲೊಬ್ಬರಿಗೆ ಕುದುರೆ ಸವಾರಿ ಪ್ರಿಯವಂತೆ.

ಅದಕ್ಕಾಗಿ ಇವರು ಮಹಾರಾಷ್ಟ್ರದಿಂದ ಕುದುರೆ ಖರೀದಿಸಿ ಇದೀಗ ಕುದುರೆ ಸವಾರಿ ಮೂಲಕವೇ ಎಲ್ಲಾ ಕಡೆಗಳಲ್ಲಿ ಸಂಚಾರ ಮಾಡುತ್ತಿದ್ದಾರಂತೆ.

ಹೌದು.. ಅಡ್ಯಾರ್ ಪದವು ನಿವಾಸಿ ಸ್ನೇಹಿತ್ ವಾಮಂಜೂರು ಅವರಿಗೆ ಸಣ್ಣ ವಯಸ್ಸಿನಿಂದಲೇ ಕುದುರೆ ಸವಾರಿಯೆಂದರೇ ಭಾರೀ ಕ್ರೇಝ್. ಆದ್ದರಿಂದ ಇವರು ತಾವು ಉದ್ಯೋಗಕ್ಕೆ ಸೇರಿದ ಮೂರೇ ವರ್ಷದಲ್ಲಿ ಹಣ ಒಟ್ಟುಗೂಡಿಸಿ ಮಹಾರಾಷ್ಟ್ರದ ಎವ್ಲಾ ಮಾರುಕಟ್ಟೆಯಿಂದ ಮರಿ ಕುದುರೆಯನ್ನು ಖರೀದಿಸಿದ್ದಾರೆ‌. ಲಕ್ಕಿ ಎಂಬ ಹೆಸರಿನ ಈ ಕುದುರೆಯೀಗ ಆರು ವರ್ಷದಿಂದ ಇವರ ಜೊತೆಗಿದೆ. ಈವೆಂಟ್ ಮ್ಯಾನೇಜ್ಮೆಂಟ್ ನಡೆಸುತ್ತಿರುವ ಅವರು ವಧು - ವರರ ಎಂಟ್ರಿಗೆಂದು ವೈವಿಧ್ಯಮಯ ಕಾರುಗಳನ್ನು ಹೊಂದಿದ್ದಾರೆ. ಅದರ ಜೊತೆಗೆ ಬೇಡಿಕೆ ಇರುವ ಸಮಾರಂಭಗಳಿಗೆ ಈ ಕುದುರೆಯನ್ನು ಬಾಡಿಗೆಗೆಂದು ಕೊಡುತ್ತಾರಂತೆ.

ತಮ್ಮ ಸುತ್ತಾಟಗಳಿಗೂ ಅವರು ಈ ಕುದುರೆಯನ್ನೇ ಬಳಸುತ್ತಾರಂತೆ. ಈ ಕುದುರೆಗೆ ಆಹಾರವಾಗಿ ಗೋಧಿ, ಜೋಳ ಬೂಸಾ, ಬಾಜಿರಾಗಳನ್ನು ಬೇಯಿಸಿ ನೀಡಲಾಗುತ್ತದೆ. ಅಲ್ಲದೆ ಅಪರೂಪಕ್ಕೆ ಕಡ್ಲೆ , ಹುರುಳಿ ಬೇಯಿಸಿ ಹಾಕಲಾಗುತ್ತದೆಯಂತೆ‌. ಸಾಮಾನ್ಯ ಪ್ರದೇಶಗಳಲ್ಲಿ 40ಕಿ.ಮೀ. ವೇಗದಲ್ಲಿ ಓಡುವ ಈ ಕುದುರೆ ಡಾಂಬರು ರಸ್ತೆಯಲ್ಲಿ 20ಕಿ.ಮೀ.ವೇಗದಲ್ಲಿ ಸಂಚರಿಸುತ್ತದೆ. ಒಟ್ಟಿನಲ್ಲಿ ಮಂಗಳೂರಿನಲ್ಲಿ ಸದಾ ವಾಹನಗಳ ಓಡಾಟಗಳ ಸದ್ದಿನ ನಡುವೆ ಕುದುರೆ ಖರಪುಟದ ಸದ್ದು ಎಲ್ಲರ ಆಕರ್ಷಣೆಗೆ ಪಾತ್ರವಾಗಿದೆ.