ಭಾರತೀಯ ಹೈಕಮಿಷನ್ ಕಚೇರಿ ಮೇಲಿನ ದಾಳಿಗೆ ತಕ್ಕ ಪ್ರತಿಕ್ರಿಯೆ: ಬ್ರಿಟನ್ ಸಚಿವ

ಲಂಡನ್: ಖಾಲಿಸ್ತಾನ ಪರ ಪ್ರತ್ಯೇಕತಾವಾದಿಗಳು ಇಲ್ಲಿನ ಭಾರತೀಯ ಹೈಕಮಿಷನ್ ಎದುರಿನ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ, ಕಚೇರಿ ಮೇಲೆ ನಡೆಸಿರುವ ದಾಳಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಬ್ರಿಟನ್ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ ಹೇಳಿದ್ದಾರೆ.
ಕಚೇರಿಗೆ ಅಗತ್ಯ ಭದ್ರತೆಯನ್ನು ನೀಡುವ ಕುರಿತು ಪರಿಶೀಲಿಸುತ್ತಿದ್ದೇವೆ. ಈ ಬಗ್ಗೆ ಪೊಲೀಸರ ಜೊತೆ ಚರ್ಚೆ ನಡೆಸಿದ್ದೇವೆ ಎಂದೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಕಚೇರಿ ಮೇಲಿನ ದಾಳಿಯು ಸ್ವೀಕಾರಾರ್ಹವಲ್ಲ. ಈ ಕುರಿತ ನಮ್ಮ ನಿಲುವನ್ನು ಭಾರತದ ರಾಯಭಾರಿ ವಿಕ್ರಂ ದೊರೈಸ್ವಾಮಿ ಅವರಿಗೆ ಸ್ಪಷ್ಟಪಡಿಸಿದ್ದೇವೆ' ಎಂದೂ ವಿವರಿಸಿದ್ದಾರೆ.
'ದಾಳಿಯ ಕುರಿತು ತನಿಖೆ ನಡೆಯುತ್ತಿದೆ. ನಾವು ಭಾರತ ಸರ್ಕಾರದ ಜೊತೆ ನಿಕಟ ಸಂಪರ್ಕದಲ್ಲಿದ್ದೇವೆ' ಎಂದಿದ್ದಾರೆ.
'ಭಾರತದ ಹೈಕಮಿಷನ್ ಕಚೇರಿ ಸೇರಿದಂತೆ ಬ್ರಿಟನ್‌ನಲ್ಲಿರುವ ವಿವಿಧ ದೇಶಗಳ ಹೈಕಮಿಷನ್ ಕಚೇರಿಗಳಿಗೆ ಹೆಚ್ಚಿನ ಭದ್ರತೆ ನೀಡುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ' ಎಂದೂ ಕ್ಲೆವರ್ಲಿ ಅವರು ಹೇಳಿದ್ದಾರೆ.
'ಭಾರತ ಮತ್ತು ಬ್ರಿಟನ್ ನಡುವಿನ ಸಂಬಂಧವು ಇನ್ನಷ್ಟು ಪ್ರವರ್ಧಮಾನಕ್ಕೆ ಬರುತ್ತಿದೆ. ಹೊಸ ಮಾರುಕಟ್ಟೆ, ಉದ್ಯೋಗ ಸೃಷ್ಟಿಗಾಗಿ ಉಭಯ ದೇಶಗಳು ಜೊತೆಯಾಗಿ ಕೆಲಸ ಮಾಡುತ್ತಿವೆ. ಭವಿಷ್ಯದಲ್ಲಿ ಎರಡು ದೇಶಗಳ ನಡುವಿನ ನಂಟು ಇನ್ನಷ್ಟು ಗಟ್ಟಿಗೊಳ್ಳಬೇಕೆಂದು ನಾವು ಬಯಸುತ್ತೇವೆ' ಎಂದೂ ಅವರು ತಿಳಿಸಿದ್ದಾರೆ.
ಬ್ರಿಟನ್‌ನಲ್ಲಿರುವ ಹೈಕಮಿಷನ್ ಕಚೇರಿಗೆ ಸೂಕ್ತ ಭದ್ರತೆ ಒದಗಿಸದಿರುವುದಕ್ಕೆ ಭಾರತವು ತೀವ್ರ ಪ್ರತಿಭಟನೆ ದಾಖಲಿಸಿದ ಬಳಿಕ ಕ್ಲೆವರ್ಲಿ ಅವರ ಈ ಹೇಳಿಕೆ ಹೊರಬಿದ್ದಿದೆ.
ಖಾಲಿಸ್ತಾನ ಪರವಾಗಿ ಬುಧವಾರ ಮತ್ತೆ ಪ್ರತಿಭಟನೆ ನಡೆಸಲು ಯತ್ನಿಸಿದವರನ್ನು ಪೊಲೀಸರು ಹೈಕಮಿಷನ್ ಕಚೇರಿಯ ಸಮೀಪ ತಡೆದರು. ಕಚೇರಿ ಆವರಣಕ್ಕೆ ಪ್ರತಿಭಟನಕಾರರು ಪ್ರವೇಶಿಸದಂತೆ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಲಾಗಿತ್ತು.
ಮಹಿಳೆಯರು, ಮಕ್ಕಳು ಸೇರಿದಂತೆ ಖಾಲಿಸ್ತಾನ ಧ್ವಜ ಹಿಡಿದಿದ್ದ ಎರಡು ಸಾವಿರಕ್ಕೂ ಹೆಚ್ಚು ಮಂದಿ ಈಚೆಗೆ ಭಾರತೀಯ ಹೈಕಮಿಷನ್ ಕಚೇರಿ ಎದುರಿನ ಧ್ವಜವನ್ನು ಕೆಳಗಿಳಿಸಿ ಪ್ರತಿಭಟನೆ ನಡೆಸಿದ್ದರು. ಬಳಿಕ ಹೈಕಮಿಷನ್ ಅಧಿಕಾರಿಗಳು ಕಚೇರಿ ಮುಂಭಾಗದಲ್ಲಿ ಬೃಹತ್ ತ್ರಿವರ್ಣಧ್ವಜ ಹಾರಿಸಿದ್ದರು.