ಬೊಮ್ಮಾಯಿ ಬಜೆಟ್ ನಲ್ಲಿ `ಕೃಷಿ ಕ್ಷೇತ್ರ'ಕ್ಕೆ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ( Chief Minister Basavaraj Bommai ) ತಮ್ಮ ಎರಡನೇ ಬಜೆಟ್ ( Karnataka Budget 2023-24 ) ಅನ್ನು ಮಂಡಿಸುತ್ತಿದ್ದಾರೆ.
ಈ ಬಜೆಟ್ ಮುಂದಿನ 25 ವರ್ಷ ದೂರದೃಷ್ಟಿ ಹೊಂದಿದೆ.
ಪಿಎಂ-ಕಿಸಾನ್ ಯೋಜನೆಯಡಿ ಕೇಂದ್ರ 10,930 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ 4,822 ಕೋಟಿ ರೂ. ಒಟ್ಟಾರೆ 15,752 ಕೋಟಿ ರೂ. ಗಳನ್ನು ರೈತರ ಖಾತೆಗೆ ನೇರ ಜಮೆ ಮಾಡಲಾಗಿದೆ.
ಕಳೆದ ವರ್ಷ ಘೋಷಿಸಿದ ಡೀಸೆಲ್ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ ಅನುದಾನ ಒದಗಿಸಲಾಗಿದೆ.
* ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸಲು 2,037 ಕೋಟಿ ರೂ., ಒದಗಿಸಲಾಗಿದೆ.
* ಕೃಷಿ ಮತ್ತು ತೋಟಗಾರಿಕೆಯಲ್ಲಿ ಹನಿ ನೀರಾವರಿಗಾಗಿ
*2,900 ಕೋಟಿ ರೂ., ಮಾರುಕಟ್ಟೆ ನೆರವು ನೀಡಲಾಗಿದೆ.
* ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮುಂತಾದ ಪರಿಕರಗಳಿಗೆ 962 ಕೋಟಿ ರೂ. ವೆಚ್ಚ ಮಾಡಲಾಗಿದೆ.
*ನೀರಾವರಿ ಪಂಪ್‌ಸೆಟ್‌ಗಳಿಗೆ 52,590 ಕೋಟಿ ರೂ. ವಿದ್ಯುತ್ ಸಹಾಯಧನ ನೀಡಲಾಗಿದೆ.
* ಫಸಲ್ ಬಿಮಾ ಯೋಜನೆಯಡಿ 86 ಲಕ್ಷ ರೈತರ ಬೆಳೆ ವಿಮೆಗಾಗಿ 4,900 ಪಾವತಿಸಲಾಗಿದೆ. ಕೋಟಿ ರೂ. ಪ್ರೀಮಿಯಂ
*ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ, ರಾಗಿ, ಜೋಳ, ಹೆಸರುಕಾಳು ಮತ್ತು ತೊಗರಿ ಮುಂತಾದ ಆಹಾರ ಧಾನ್ಯಗಳ ಖರೀದಿಗಾಗಿ 6,650 ಕೋಟಿ ರೂ. ಒದಗಿಸಲಾಗಿದೆ.
* ಬೆಳೆಗಳು ಸಂಸ್ಕರಣೆ, ಶೇಖರಣೆಗಾಗಿ, 10.45 ಲಕ್ಷ ಫಲಾನುಭವಿಗಳಿಗೆ 175 ಕೋಟಿ ರೂ ಗಳ ನೆರವು ನೀಡಲಾಗಿದೆ.
* ತೋಟಗಾರಿಕೆ ಹಾಗೂ ರೇಷ್ಮೆ ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶಕ್ಕಾಗಿ 5,245 ಕೋಟಿ ರೂ. ವೆಚ್ಚ ಮಾಡಲಾಗಿದೆ.
* ರೈತ ವಿದ್ಯಾನಿಧಿ ಯೋಜನೆಯಡಿಯಲ್ಲಿ 10.32 ಲಕ್ಷ ವಿದ್ಯಾರ್ಥಿಗಳಿಗೆ ಒಟ್ಟು 725 ಕೋಟಿ ರೂ. ಗಳನ್ನು ನೀಡಲಾಗಿದೆ.
ರಾಜ್ಯದ 3.6 ಲಕ್ಷ ರೈತರ ಅನುಕೂಲಕ್ಕಾಗಿ ನಮ್ಮ ಸರ್ಕಾರವು ಕೈಗೊಂಡಿರುವ ಐತಿಹಾಸಿಕ ಕ್ರಮದಿಂದ 2022-23ನೇ ಸಾಲಿನಲ್ಲಿ ಪ್ರಪ್ರಥಮ ಬಾರಿಗೆ 5 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿಸಲು ಪ್ರತಿ ಕ್ವಿಂಟಾಲ್‌ಗೆ 3,578 ರೂ. ನಂತೆ ಒಟ್ಟು 1879 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದರೊಂದಿಗೆ 75 ಸಾವಿರ ರೈತರಿಂದ ಭತ್ತ ಹಾಗೂ 40 ಸಾವಿರ ರೈತರಿಂದ ಬಿಳಿ ಜೋಳವನ್ನು ಖರೀದಿಸಲು 1072 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದಲ್ಲದೇ, ಈ ವರ್ಷದಲ್ಲಿ ಕುಚ್ಚಲಕ್ಕಿ ಖರೀದಿಗೂ ಸಹ ಪ್ರೋತ್ಸಾಹ ನೀಡಲಾಗಿದೆ. ಈ ಕ್ರಮಗಳಿ೦ದ ಸ್ಥಳೀಯ ಧಾನ್ಯಗಳನ್ನು ಬೆಳೆಯುವ ರಾಜ್ಯದ ರೈತರಿಗೆ ನೆರವಾಗಿದೆ. ಈ ಪದ್ಧತಿಯನ್ನು ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪ್ರಥಮ ಬಾರಿಗೆ, ಬೆಳೆ ಹಾನಿಗೆ ಕೇಂದ್ರವು ನಿಗದಿ ಪಡಿಸಿರುವ ಪರಿಹಾರವನ್ನು ಹೆಚ್ಚಿಸಿ, ರಾಜ್ಯ ಸರ್ಕಾರವು ಪರಿಷ್ಕೃತ ದರದಲ್ಲಿ ದಾಖಲೆಯ ಅವಧಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರವನ್ನು ಜಮೆ ಮಾಡಿದೆ. 2022-23ನೇ ಸಾಲಿನಲ್ಲಿ 13,09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾದ 14.63 ಲಕ್ಷ ರೈತರ ಬ್ಯಾಂಕ್ ಖಾತೆಗೆ ನೇರವಾಗಿ 2,031 ಕೋಟಿ ರೂ. ಗಳನ್ನು 2 ತಿಂಗಳೊಳಗೆ ಜಮೆ ಮಾಡಲಾಗಿದೆ.
ಬೀದರ್, ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ನೆಟೆ ರೋಗದಿಂದ ಹಾನಿಯಾಗಿರುವ ತೊಗರಿ ಬೆಳೆಗೆ ಪ್ರತಿ ಹೆಕ್ಟೇಗೆ 10,000 ರೂ. ನಂತೆ 223 ಕೋಟಿ ರೂ. ಪರಿಹಾರವನ್ನು ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ವರ್ಷದಿಂದ ರೈತರಿಗೆ ನೀಡುವ ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿಯನ್ನು 3 ಲಕ್ಷ ರೂ. ಗಳಿಂದ 5 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗುವುದು. ಇದರಿಂದ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ರೈತರಿಗೆ ಸುಲಭವಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ಸಾಲ ಸೌಲಭ್ಯ ದೊರಕಿಸಿದಂತಾಗುತ್ತದೆ. ಈ ವರ್ಷ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25,000 ಕೋಟಿ ರೂ. ಗಳಷ್ಟು ಸಾಲ ವಿತರಿಸಲಾಗುವುದು.
ಇದರೊಂದಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ 'ಭೂ ಸಿರಿ' ಎಂಬ ನೂತನ ಯೋಜನೆಯಡಿ 2023-24 ಸಾಲಿನಿಂದ 10 ಸಾವಿರ ರೂ. ಗಳ ಹೆಚ್ಚುವರಿ ಸಹಾಯಧನ ನೀಡಲು ನಿರ್ಧರಿಸಿದ್ದೇವೆ. ತುರ್ತು ಸಂದರ್ಭಗಳಲ್ಲಿ ರೈತರಿಗೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮುಂತಾದ ಪರಿಕರಗಳನ್ನು ಖರೀದಿಸಲು ಇದರಿಂದ ಅನುಕೂಲವಾಗಲಿದೆ. ಈ ಮೊತ್ತದಲ್ಲಿ ರಾಜ್ಯ ಸರ್ಕಾರದ 2,500 ರೂ. ಹಾಗೂ ನಬಾರ್ಡ್ ನ 7,500 ರೂ. ಸೇರಿದ್ದು, ರಾಜ್ಯದ ಸುಮಾರು 50 ಲಕ್ಷ ರೈತರಿಗೆ ಅನುಕೂಲವಾಗಲಿದೆ.
ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ. ವೆಚ್ಚದಲ್ಲಿ ಜೀವನ್‌ಜ್ಯೋತಿ ವಿಮಾ ಯೋಜನೆಯ ನೆರವಿನೊಂದಿಗೆ ಅವರ ಬದುಕಿಗೆ ಭದ್ರತೆ ಒದಗಿಸಲುಕ್ರಮ ವಹಿಸಲಾಗುವುದು.
ರೈತರಿಗೆ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳು ಸುಲಭವಾಗಿ ದೊರೆಯುವಂತೆ ಮಾಡಲು ಕೃಷಿ ಇಲಾಖೆಯು ಈಗಾಗಲೇ ನಿರ್ವಹಿಸುತ್ತಿರುವ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ 300 ಹೈಟೆಕ್ ಹಾರ್ವೆಸ್ಟರ್ ಗಳನ್ನು ಹಂತ ಹಂತವಾಗಿ ಒದಗಿಸಲು ಉದ್ದೇಶಿಸಲಾಗಿದೆ. 2023-24ನೇ ಸಾಲಿನಲ್ಲಿ 100 ಹೈಟೆಕ್ ಹಾರ್ವೆಸ್ಟರ್ ಗಳಿಗೆ ತಲಾ 50 ಲಕ್ಷ ರೂ. ನಂತೆ, ಈ ವರ್ಷ 50 ಕೋಟಿ ರೂ. ಒದಗಿಸಲಾಗುವುದು.
ಇಸ್ರೋ ಸಂಸ್ಥೆ ಸಹಯೋಗದೊಂದಿಗೆ ಡಿಜಿಟಲ್ ಕೃಷಿಯಲ್ಲಿ ಜಿಯೋ-ಸ್ಪೇಷಿಯಲ್ ತಾಂತ್ರಿಕತೆಗಳನ್ನು ಅಳವಡಿಸಲು 50 ಕೋಟಿ ರೂ. ವೆಚ್ಚದಲ್ಲಿ ಒಂದು ಹೊಸ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಯೋಜನೆಯಿಂದ ದೊರಕುವ ಮಾಹಿತಿಗಳನ್ನು ಉಪಯೋಗಿಸಿ, Precision Farming ಸೇರಿದಂತೆ ತಮ್ಮ ಉತ್ಪಾದನೆಯನ್ನು ಹೆಚ್ಚಿಸಲು ತಿಳಿವಳಿಕೆಯುಳ್ಳ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ರೈತರಿಗೆ ಅನುಕೂಲವಾಗಲಿದೆ. ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023ರ ಅಂಗವಾಗಿ ಕಿರುಧಾನ್ಯಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು 'ರೈತಸಿರಿ' ಯೋಜನೆಯಡಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ 10,000 ಗಳ ಪ್ರೋತ್ಸಾಹಧನವನ್ನು ನೀಡಲಾಗುವುದು. ಅಲ್ಲದೆ ಸಿರಿಧಾನ್ಯಗಳನ್ನು ಕ್ಷೇತ್ರಮಟ್ಟದಲ್ಲಿ ಸಂಸ್ಕರಣೆ, ಗ್ರೇಡಿಂಗ್, ಪ್ಯಾಕಿಂಗ್ ಮಾಡುವ ರೈತ ಉತ್ಪಾದಕ ಸಂಸ್ಥೆಗಳಿಗೆ ಮುಖ್ಯಮಂತ್ರಿ ರೈತ ಸಹಾಯಧನಕ್ಕೆ ಪ್ರಾಶಸ್ಯ ನೀಡಲಾಗುವುದು. ಉನ್ನತಿ ಯೋಜನೆಯಡಿ
ಕೇಂದ್ರ ಸರ್ಕಾರವು ತನ್ನ ಆಯವ್ಯಯದಲ್ಲಿ ಒಂದು ಕೋಟಿ ರೈತರನ್ನು ನೈಸರ್ಗಿಕ ಕೃಷಿಗೆ ಆಕರ್ಷಿಸಲಾಗುವುದೆಂದು ಘೋಷಿಸಿದೆ. ಇದಕ್ಕೆ ಪೂರಕವಾಗಿ ಪ್ರತಿ ತಾಲ್ಲೂಕಿಗೆ ಒಂದರಂತೆ ತಲಾ 50 ಹೆಕ್ಟೇರ್ ಪ್ರದೇಶದಲ್ಲಿ ಗುಚ್ಛ ಮಾದರಿಯಲ್ಲಿ ಮುಂದಿನ 4 ವರ್ಷಗಳಲ್ಲಿ ಒಂದು ಲಕ್ಷ ಹೆಕ್ಟೇರ್ ಪ್ರದೇಶವನ್ನು ನೈಸರ್ಗಿಕ ಮತ್ತು ಸಮಗ್ರ ಕೃಷಿಗೆ ಒಳಪಡಿಸಲಾಗುವುದು.