ಬಿಬಿಸಿ ಮಾಧ್ಯಮ ಸಂಸ್ಥೆ ತೆರಿಗೆ ಪಾವತಿಸದ್ದಕ್ಕೆ ಸಾಕ್ಷ್ಯ ಲಭ್ಯ: ಸಿಬಿಡಿಟಿ

ನವದೆಹಲಿ: 'ಪ್ರಮುಖ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದರ ದಾಖಲೆಗಳ 'ಪರಿಶೀಲನೆ' ಸಂದರ್ಭದಲ್ಲಿ, ಸಂಸ್ಥೆಯು ತೆರಿಗೆ ಪಾವತಿಸದಿರುವುದು ಹಾಗೂ ಬಹಿರಂಗಪಡಿಸದ ಆದಾಯ ಹೊಂದಿರುವ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿವೆ' ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಶುಕ್ರವಾರ ಹೇಳಿದೆ.
ದೆಹಲಿ ಹಾಗೂ ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಸತತ 60 ಗಂಟೆಗಳಷ್ಟು 'ಪರಿಶೀಲನೆ' ನಡೆಸಿದ್ದರು. ಈ 'ಪರಿಶೀಲನೆ' ಬಳಿಕ ಮಂಡಳಿಯು ಮೊದಲ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ. ಆದರೆ, ಈ ಹೇಳಿಕೆಯಲ್ಲಿ ಬಿಬಿಸಿ ಹೆಸರನ್ನು ಉಲ್ಲೇಖಿಸಿಲ್ಲ.
'ಇಂಗ್ಲಿಷ್ ಅಲ್ಲದೇ, ಭಾರತದ ಅನೇಕ ಭಾಷೆಗಳಲ್ಲಿ ಗಮನಾರ್ಹವೆನಿಸುವಷ್ಟು ವಿಷಯವಸ್ತುವನ್ನು ಮಾಧ್ಯಮ ಸಂಸ್ಥೆ ಬಳಕೆ ಮಾಡಿದೆ. ಕಂಪನಿಯು ತನ್ನ ಅಂಗಸಂಸ್ಥೆಗಳ ಮೂಲಕ ಭಾರತದಲ್ಲಿ ಹೊಂದಿರುವ ಕಾರ್ಯಾಚರಣೆಗಳ ಪ್ರಮಾಣಕ್ಕೂ, ಅವುಗಳು ಗಳಿಸಿದ ಆದಾಯ ಹಾಗೂ ಲಾಭಕ್ಕೂ ಹೊಂದಿಕೆಯಾಗದಿರುವ ಅಂಶ ಪರಿಶೀಲನೆ ವೇಳೆ ಕಂಡುಬಂದಿದೆ' ಎಂದು ಮಂಡಳಿ ಹೇಳಿದೆ.
'ಸಂಸ್ಥೆಯಿಂದಾದ ಕೆಲ ಪಾವತಿಗಳಿಗೆ ಸಂಬಂಧಿಸಿ ತೆರಿಗೆ ಸಂದಾಯ ಮಾಡಿಲ್ಲ. ಈ ರೀತಿ ಪಾವತಿಸಲಾದ ಹಣವು, ಮಾಧ್ಯಮಸಂಸ್ಥೆಯು ಭಾರತದಲ್ಲಿ ಗಳಿಸಿರುವ ಆದಾಯವೇ ಆಗಿದೆ ಎಂಬ ಮಾಹಿತಿಯನ್ನು ಮುಚ್ಚಿಟ್ಟಿರುವುದು ಕೂಡ ಪರಿಶೀಲನೆ ಸಂದರ್ಭದಲ್ಲಿ ಗೊತ್ತಾಗಿದೆ. ಇದಕ್ಕೆ ಸಂಬಂಧಪಟ್ಟ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ' ಎಂದೂ ಮಂಡಳಿ ಹೇಳಿದೆ.