ಬಾಗಲಕೋಟೆ: ಸತತ 10 ಚುನಾವಣೆಗೆ ಒಂದೇ ಕುಟುಂಬದವರ ಸ್ಪರ್ಧೆ

ಬಾಗಲಕೋಟೆ: ಸತತ 10 ಚುನಾವಣೆಗೆ ಒಂದೇ ಕುಟುಂಬದವರ ಸ್ಪರ್ಧೆ

ಬಾಗಲಕೋಟೆ: ಜಿಲ್ಲೆಯ ಹುನಗುಂದ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಸೇರಿದಂತೆ 16 ಬಾರಿ ಚುನಾವಣೆ ನಡೆದಿದೆ. ಈ ಪೈಕಿ 10 ಚುನಾವಣೆಗಳಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಒಂದೇ ಪಕ್ಷದಿಂದ ಸ್ಪರ್ಧಿಸಿದ್ದು, ಎಲ್ಲರೂ ಶಾಸಕರಾಗಿ ಆಯ್ಕೆಯಾಗಿದ್ದಾರೆ.

1985ರಲ್ಲಿ ಕಾಂಗ್ರೆಸ್‌ನಿಂದ ಕಾಶಪ್ಪನವರ ಕುಟುಂಬದ ಎಸ್‌.ಆರ್.ಕಾಶಪ್ಪನವರ ಮೊದಲ ಬಾರಿಗೆ ಹುನುಗುಂದ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುತ್ತಾರೆ. ನಂತರ 1989, 94, 99ರಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ವಿಜಯ ದಾಖಲಿಸುತ್ತಾರೆ.

2003ರಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಬಳಿ ನಡೆಯುವ ರಸ್ತೆ ಅಪಘಾತದಲ್ಲಿ ಎಸ್‌.ಆರ್‌.ಕಾಶಪ್ಪನವರ ನಿಧನರಾಗುತ್ತಾರೆ. ಉಪ ಚುನಾವಣೆಯಲ್ಲಿ ಅವರ ಪತ್ನಿ ಗೌರಮ್ಮ ಕಾಶಪ್ಪನವರಿಗೆ ಟಿಕೆಟ್‌ ನೀಡಲಾಗುತ್ತದೆ. ಅವರು ಗೆಲುವು ಸಾಧಿಸಿ, ವಿಧಾನಸೌಧದ ಮೆಟ್ಟಿಲು ಏರುತ್ತಾರೆ.

2004ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಗೌರಮ್ಮ ಕಾಶಪ್ಪನವರ ಸ್ಪರ್ಧಿಸಿ, ಸೋಲುತ್ತಾರೆ. 2008ರಲ್ಲಿ ಗೌರಮ್ಮ ಅವರನ್ನು ಬಿಟ್ಟು, ಪಕ್ಷವು ಅವರ ಪುತ್ರ ವಿಜಯಾನಂದ ಕಾಶಪ್ಪನವರ ಅವರಿಗೆ ಟಿಕೆಟ್‌ ನೀಡುತ್ತದೆ. ವಿಜಯಾನಂದ ಮೊದಲ ಯತ್ನದಲ್ಲಿ ಸೋಲುತ್ತಾರೆ. 2013ರ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ.

2018ರಲ್ಲಿ ವಿಜಯಾನಂದ ಸೋಲುತ್ತಾರೆ. 2023ರ ಚುನಾವಣೆಗೆ ಸ್ಪರ್ಧಿಸಲು ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ವಿಜಯಾನಂದ ಕಾಶಪ್ಪನವರ ಅವರ ಹೆಸರು ಘೋಷಿಸಲಾಗಿದೆ.

ಕಾಶಪ್ಪನವರ ಕುಟುಂಬ ಸದಸ್ಯರು ಎದುರಿಸಿರುವ 10 ಚುನಾವಣೆಗಳಲ್ಲಿ ಐದು ಬಾರಿ ಗೆಲುವು ಸಾಧಿಸಿದ್ದರೆ, ಐದು ಬಾರಿ ಸೋಲನುಭವಿಸಿದ್ದಾರೆ. ವಿಜಯಾನಂದ ಕಾಶಪ್ಪನವರ ಸಹೋದರ ದೇವಾನಂದ ಕಾಶಪ್ಪನವರ ಒಮ್ಮೆ ಇಳಕಲ್‌ ನಗರಸಭೆ ಅಧ್ಯಕ್ಷರಾಗಿದ್ದರೆ, ವಿಜಯಾನಂದ ಅವರ ಪತ್ನಿ ವೀಣಾ ಕಾಶಪ್ಪನವರ ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದರು. 2019ರಲ್ಲಿ ವೀಣಾ ಅವರು ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಸೋತಿದ್ದಾರೆ.