ಬಿಜೆಪಿ ಸೇರಲಿರುವ ಕಿಚ್ಚ?: ಡಬಲ್ ಇಂಜಿನ್ ಸರ್ಕಾರಕ್ಕೆ ಸಿಕ್ತು ಡಬಲ್ ಬಲ- ಸಿದ್ದರಾಮಯ್ಯ ಪ್ರತಿಕ್ರಿಯೆ ಏನು
ಬೆಂಗಳೂರು ಏಪ್ರಿಲ್ 5: ಸ್ಯಾಂಡಲ್ವುಡ್ನ ಜನಪ್ರಿಯ ನಟ ಸುದೀಪ್ ಬಿಜೆಪಿ ಪಕ್ಷ ಸೇರಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಸುದ್ದಿಗಾರರು ಹೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ,' ಸುದೀಪ್ ಅವರ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ; ನಮ್ಮದೇನೂ ಅಭ್ಯಂತರವಿಲ್ಲ..!' ಎಂದಿದ್ದಾರೆ.ಸಾರ್ವತ್ರಿಕ ಚುನಾವಣೆಗೆ ಮುನ್ನ ಒಂದಷ್ಟು ನಾಯಕರು ಪಕ್ಷ ಬಿಟ್ಟು ಹೋಗುವುದು, ಪಕ್ಷಕ್ಕೆ ಸೇರ್ಪಡೆಯಾಗುವುದು ಸಾಮಾನ್ಯ. ಖ್ಯಾತ ಚಲನಚಿತ್ರ ತಾರೆಯರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು, ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಪಕ್ಷಗಳ ನಾಯಕರು ಪ್ರಯತ್ನಿಸುತ್ತಾರೆ.
ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಕಿಚ್ಚ ಸುದೀಪ್ ಮತ್ತು ತೂಗುದೀಪ ದರ್ಶನ್ ಅವರನ್ನು ಹಿಂದಿನಿಂದಲೂ ಪ್ರಮುಖ ಪಕ್ಷಗಳ ನಾಯಕರು ಸಂಪರ್ಕಿಸುತ್ತಿದ್ದರು. ಕೆಲ ಸಮಯದ ಹಿಂದೆ ಕಿಚ್ಚ ಸುದೀಪ್ಕಾಂಗೆ ಸೇರುತ್ತಾರೆ ಎಂದು ಸುದ್ದಿಯಾಗಿತ್ತು. ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ನಂತರ ಕಿಚ್ಚ ಸುದೀಪ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ ಆ ಸುದ್ದಿ ತಣ್ಣಗಾಯಿತು.
ಇದೀಗ ಬಂದಿರುವ ಹೊಸ ಸುದ್ದಿ ಅಂದರೆ ಕಿಚ್ಚ ಸುದೀಪ್ ಬಿಜೆಪಿ ಸೇರಿದ್ದಾರೆ ಎನ್ನುವ ವಿಚಾರ. ಇಂದು ಮಧ್ಯಾಹ್ನ ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಾರೆ ಎನ್ನುವುದು ಸದ್ಯದ ಬಿಗ್ ನ್ಯೂಸ್. ಇನ್ನು ಅವರ ಒಂದು ಕಾಲದ ಕುಚ್ಚಿಕ್ಕು ಗೆಳೆಯ ದರ್ಶನ್ ತೂಗುದೀಪ ಸಹ ಬಿಜೆಪಿಗೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವು ಹಿಟ್ ಚಿತ್ರಗಳನ್ನು ನೀಡಿರುವ ಈ ಇಬ್ಬರು ಕಲಾವಿದರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕನ್ನಡಿಗರಿಗೆ ಚಿರಪರಿಚಿತರು. ಅಲ್ಲದೆ ಹಲವು ರಾಜಕೀಯ ನಾಯಕರುಗಳ ಜೊತೆ ಉತ್ತಮ ಒಡನಾಟ, ಬಾಂಧವ್ಯ ಹೊಂದಿದ್ದಾರೆ.
ಇಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಅಚ್ಚರಿಯ ಸಂಗತಿಯೆಂದರೆ ಕಿಚ್ಚ ಸುದೀಪ್ ಇಂದು ಅಂದರೆ ಏಪ್ರಿಲ್ 5ರಂದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎನ್ನುವುದು. ಎಎನ್ಐ ಸುದ್ದಿಸಂಸ್ಥೆಯ ವರದಿ ಪ್ರಕಾರ, ಕಿಚ್ಚ ಸುದೀಪ್ ಇಂದು ಮಧ್ಯಾಹ್ನ 1.30ರಿಂದ 2.30ರ ನಡುವೆ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಬಿಜೆಪಿ ಬಾವುಟ ಹಾರಿಸಲಿದ್ದಾರೆ ಎನ್ನುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಮ್ಮುಖದಲ್ಲಿ ಕಿಚ್ಚ ಸುದೀಪ್ ಬಿಜೆಪಿಗೆ ಸೇರುತ್ತಾರೆ ಎಂಬ ಮಾಹಿತಿ ಸಿಕ್ಕಿದೆ.
ಡಬಲ್ ಇಂಜಿನ್ ಸರ್ಕಾರಕ್ಕೆ ಸಿಕ್ತಾ ಡಬಲ್ ಬಲ
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತಬೇಟೆ ಕೂಡ ಕಳೆಗಟ್ಟಿದೆ. ರಾಜ್ಯದ ಎಲ್ಲೆಡೆ ಪಕ್ಷಗಳ ಧ್ವಜ, ಜನನಾಯಕರ ಫೋಟೋ, ಫ್ಲೆಕ್ಸ್, ಬ್ಯಾನರ್ಗಳು, ಪಕ್ಷದ ಚಿಹ್ನೆಗಳು ರಾರಾಜಿಸುತ್ತಿವೆ. ಸಾಮಾನ್ಯವಾಗಿ ಹೊಸ ಚಿತ್ರ ಬಂದರೆ ಸಿನಿಮಾ ನಾಯಕರು ಬ್ಯಾನರ್ಗಳಲ್ಲಿ ಮಿಂಚುತ್ತಾರೆ. ಅದೇ ಚುನಾವಣೆ ಬಂದರೆ ಜನನಾಯಕರು ಬ್ಯಾನರ್ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾ ನಟರ ಅಭಿಮಾನಿಗಳು, ಜನನಾಯಕರ ಆಪ್ತರು ತಮ್ಮ ತಮ್ಮ ನೆಚ್ಚಿನ ನಾಯಕರ ಬ್ಯಾನರ್ ಫ್ಲೆಕ್ಸ್ಗಳನ್ನು ಹಾಕುವ ಮೂಲಕ ಸಂಭ್ರಮಿಸುತ್ತಾರೆ.
ಹೀಗಿರುವಾಗ ಸಿನಿಮಾ ನಾಯಕರು ಯಾವುದಾದರು ಒಂದು ಪಕ್ಷ ಸೇರಿದರೆ ಇನ್ನೂ ಅಭಿಮಾನಿಗಳ ಸಂಭ್ರಮ ಇನ್ಯಾವ ರೀತಿ ಇರಬೇಡ. ಇಂದು ರಾಜ್ಯದಲ್ಲಿ ಆಗಿದ್ದೂ ಇದೇನೇ. ಸಿನಿಮಾ ನಟ ಬಿಜೆಪಿ ಸೇರುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇದರಿಂದಾಗಿ ಬಿಜೆಪಿಗೆ ಮತ್ತಷ್ಟು ಬಲಬಂತಂತಾಗಿದೆ.
ಸುಮಲತಾ ಅಂಬರೀಷ್ ಕೂಡ ಬಿಜೆಪಿಗೆ ಬೆಂಬಲ
ಈ ಹಿಂದೆ ಮಂಡ್ಯ ಕ್ಷೇತ್ರದ ಸಂಸದೆಯಾದ ಸುಮಲತಾ ಅಂಬರೀಷ್ ಕೂಡ ಬಿಜೆಪಿಗೆ ಜೈ ಎಂದಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು. ಹೀಗಾಗಿ ಮಂಡ್ಯದ ಕಲುಷಿತ ರಾಜಕೀಯವನ್ನು ಸ್ವಚ್ಛಗೊಳಿಸಲು ನಾನು ಮೋದಿ ಅವರಿಗೆ ಬೆಂಬಲ ನೀಡುತ್ತೇನೆ ಎಂದು ಸುಮಲತಾ ಹೇಳಿದ್ದಾರೆ.
ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಮಂಡ್ಯ ಕ್ಷೇತ್ರದ ಸಂಸದೆಯಾದ ಸುಮಲತಾ ಅಂಬರೀಷ್ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಸುಮಲತಾ ಅಂಬರೀಷ್ ಗೆಲುವಿಗೆ ಜೋಡೆತ್ತುಗಳಾಗಿ ನಟ ದರ್ಶನ್ ಹಾಗೂ ಯಶ್ ಸಾಥ್ ನೀಡಿದ್ದರು. ಚುನಾವಣೆ ಪ್ರಚಾರದ ವೇಳೆ ಇಬ್ಬರು ಸುಮಲತಾ ಬೆನ್ನೆಲುಬಾಗಿ ನಿಂತಿದ್ದರು. ಈಗ ಸುಮಲತಾ ಬಿಜೆಪಿಗೆ ಬೆಂಬಲ ನೀಡಿದರೆ ದರ್ಶನ್ ಹಾಗೂ ಯಶ್ ಕೂಡ ಬಿಜೆಪಿಗೆ ಬೆಂಬಲ ನೀಡುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ಹಾಗೊಂದು ವೇಳೆ ಈ ಇಬ್ಬರು ಜನಪ್ರಿಯ ನಾಯಕರು ಸಮಲತಾ ನಿರ್ಧಾರಕ್ಕೆ ಬದ್ಧರಾಗಿ ನಡೆದುಕೊಂಡರೆ, ರಾಜ್ಯದಲ್ಲಿ ಬಿಜೆಪಿ ಗೆಲುವು ಖಚಿತ ಎನ್ನುತ್ತವೆ ಬಲ್ಲ ಮೂಲಗಳು.