ಪೋಷಕರು ಮಾಲ್ಗೆ ಹೋಗಬೇಡ ಎಂದಿದ್ದೇ ತಪ್ಪಾಯ್ತು; ಸಿಟ್ಟಾದ ಬಾಲಕಿ ಮಾಡಿದ್ದೇನು?

ಬೆಂಗಳೂರು: ತರಗತಿ ಬಿಟ್ಟು ಮಾಲ್ಗೆ ಹೋಗಬೇಡ ಎಂದು ಪೋಷಕರು ಹೇಳಿದ್ದಕ್ಕೆ ಸಿಟ್ಟಾದ ಬಾಲಕಿಯೊಬ್ಬಳು ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದಾಳೆ.
ವಿಜಯನಗರದ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ಬಾಲಕಿ ವಿದ್ಯಾಭ್ಯಾಸ ಮಾಡುತ್ತಿದ್ದಳು.
ಶಾಲಾ ಆಡಳಿತ ಮಂಡಳಿಯಿಂದ ಮಾಹಿತಿ ಬರುತ್ತಿದ್ದಂತೆ ಪೋಷಕರು ಮಗಳಿಗೆ ಬೈದು ಬುದ್ದಿ ಹೇಳಿದ್ದಾರೆ. ಇದಾಗಿ ಮರುದಿನ ಸ್ಕೂಟಿಯಲ್ಲಿ ಶಾಲೆಗೆಂದು ತೆರಳಿದ ಬಾಲಕಿ, ಮತ್ತೆ ಮನೆಗೆ ಹಿಂತಿರುಗಿಲ್ಲ. ಇದರಿಂದ ಚಿಂತಿತರಾದ ಪೋಷಕರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೋಷಕರು ದೂರು ದಾಖಲಿಸಿದ ದಿನದಂದೇ ಬಾಲಕಿ ಸಂಜೆಯ ವೇಳೆ ಗೊರಗುಂಟೆಪಾಳ್ಯ ಬಸ್ ನಿಲ್ದಾಣದಲ್ಲಿ ಒಬ್ಬೊಂಟಿಯಾಗಿ ನಿಂತಿದ್ದಳು. ಇದನ್ನು ಗಮನಿಸಿದ ಆಟೋ ಚಾಲಕನೊಬ್ಬ ಬಂದು ಬಾಲಕಿಯನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಬಾಲಕಿ ಅನುಮಾನ ಬರುವ ರೀತಿಯಲ್ಲಿ ಉತ್ತರಿಸಿದ್ದಾಳೆ. ಕೂಡಲೇ ಎಚ್ಚೆತ್ತ ಆಟೋ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ನಂತರ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಾಲಕಿಯ ರಕ್ಷಿಸಿದ್ದಾರೆ.