ಪೇಶಾವರ ಮಸೀದಿ ಸ್ಫೋಟಗೊಂಡ ಸ್ಥಳದಲ್ಲಿ 'ಆತ್ಮಾಹುತಿ ಬಾಂಬರ್' ನ ತುಂಡರಿಸಿದ ತಲೆ ಪತ್ತೆ

ಪೇಶಾವರ: ಪಾಕಿಸ್ತಾನದ ವಾಯುವ್ಯ ಪೇಶಾವರ ಮಸೀದಿಯಲ್ಲಿ ನಡೆದ ಆತ್ಮಾಹುತು ಬಾಂಬ್ ಸ್ಫೋಟಿಸಿಕೊಂಡ ಶಂಕಿತ ಉಗ್ರನ ತಲೆಯನ್ನು ರಕ್ಷಣಾ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಬಾಂಬ್ ಸ್ಫೋಟದಿಂದ ಸಾವಿನ ಸಂಖ್ಯೆ 93 ಕ್ಕೆ ಏರಿಕೆಯಾಗಿದ್ದು, 221 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಸೋಮವಾರ (ನಿನ್ನೆ) ಮಧ್ಯಾಹ್ನ 1.40 ರ ಸುಮಾರಿಗೆ ಪೊಲೀಸ್ ಲೈನ್ಸ್ ಪ್ರದೇಶದ ಮಸೀದಿಯೊಳಗೆ ಪೊಲೀಸ್, ಸೇನೆ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯನ್ನು ಒಳಗೊಂಡ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಆತ್ಮಾಹುತಿ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ, ಪರಿಣಾಮ ಮಸೀದಿಯ ಮೇಲ್ಛಾವಣಿ ಅಲ್ಲಿದ್ದವರ ಮೇಲೆ ಕುಸಿದು ಬಿದ್ದಿತ್ತು.
ಮುಂದಿನ ಸಾಲಿನಲ್ಲಿದ್ದ ಕ್ಯಾಪಿಟಲ್ ಸಿಟಿ ಪೊಲೀಸ್ ಅಧಿಕಾರಿ (ಸಿಸಿಪಿಒ) ಪೇಶಾವರ ಮೊಹಮ್ಮದ್ ಐಜಾಜ್ ಖಾನ್ ಜಿಯೋ ಟಿವಿಗೆ ಸ್ಪೋಟವು ಆತ್ಮಾಹುತಿ ದಾಳಿಯಂತೆ ತೋರುತ್ತಿದೆ ಮತ್ತು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ರಾಜಧಾನಿ ಪೇಶಾವರದ ಸ್ಥಳದಲ್ಲಿ ಶಂಕಿತ ಬಾಂಬರ್‌ನ ತಲೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಸ್ಫೋಟದ ಮೊದಲು ದಾಳಿಕೋರನು ಪೊಲೀಸ್ ಲೈನ್‌ನಲ್ಲಿ ಈಗಾಗಲೇ ಇದ್ದ ಸಾಧ್ಯತೆಯಿದೆ. ಅವನು ಮಸೀದಿಯನ್ನು ಪ್ರವೇಶಿಸಲು ಅಧಿಕೃತ ವಾಹನವನ್ನು ಬಳಸಿರಬಹುದು. ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಸ್ಫೋಟದ ನಿಖರ ಸ್ವರೂಪ ತಿಳಿಯಲಿದೆ ಎಂದು ಖೈಬರ್ ಪಖ್ತುಂಖ್ವಾದ ಉಸ್ತುವಾರಿ ಮುಖ್ಯಮಂತ್ರಿ ಮುಹಮ್ಮದ್ ಅಜಮ್ ಖಾನ್ ತಿಳಿಸಿದ್ದಾರೆ.
ದಾಳಿ ಹಿನ್ನೆಲೆಯಲ್ಲಿ ಇಂದು ಪ್ರಾಂತ್ಯದಲ್ಲಿ ಶೋಕಾಚರಣೆಯ ದಿನ ಘೋಷಿಸಿದ್ದಾರೆ.
ಪಾಕಿಸ್ತಾನಿ ತಾಲಿಬಾನ್ ಎಂದು ಕರೆಯಲ್ಪಡುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಆತ್ಮಾಹುತಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಇದು ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಕೊಲ್ಲಲ್ಪಟ್ಟ ಟಿಟಿಪಿ ಕಮಾಂಡರ್ ಉಮರ್ ಖಾಲಿದ್ ಖುರಾಸಾನಿ ಅವರ ಪ್ರತೀಕಾರದ ದಾಳಿಯ ಭಾಗವಾಗಿದೆ ಎಂದು ಹೇಳಲಾಗುತ್ತಿದೆ.