ಪುನೀತ್ ಆತ್ಮದ ಜತೆ ಮಾತಾಡಿದ್ದಾಗಿ ವಿಡಿಯೋ ಹಂಚಿಕೊಂಡ ಚಾರ್ಲಿ: ಆ ದೃಶ್ಯ ನೋಡುತ್ತಲೇ ಅಪ್ಪು ಅಭಿಮಾನಿಗಳ ಕಣ್ಣು ಕೆಂಪಾಯ್ತು

ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರ ಆತ್ಮದ ಜತೆ ಮಾತನಾಡಿದ್ದೇನೆ. ಅವರ ಆತ್ಮ 'ಐ ಲವ್ ದೆಮ್', 'ಹಾರ್ಟ್ ಫೇಲ್..', 'ಡಾಕ್ಟರ್ ಡಾಕ್ಟರ್…' ಎನ್ನುತ್ತಿದೆ ಎಂದು ಚಾರ್ಲಿ ಚಿಟ್ವೆಂಡೆನ್ ಪ್ಯಾರಾನಾರ್ಮಲ್ ಹೆಸರಿನ ವಿದೇಶಿಗ ಯೂಟೂಬ್ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ಭಾರೀ ಕೋಲಾಹಲವನ್ನೇ ಎಬ್ಬಿಸಿದೆ.
ಪುನೀತ್ ರಾಜ್‌ಕುಮಾರ್ ನಿಧನರಾಗಿ ಇಂದಿಗೆ 11 ದಿನ ಆಗಿದೆ. ಆದರೂ ಅಸಂಖ್ಯಾತ ಅಭಿಮಾನಿಗಳ ಮನದಲ್ಲಿ ಮಡುಗಟ್ಟಿರುವ ನೋವು ಕಿಂಚಿತ್ತೂ ಕಡಿಮೆ ಆಗಿಲ್ಲ. ಅಪ್ಪು ಅಗಲಿಕೆಗೆ ನಿತ್ಯವೂ ಕಂಬನಿ ಮಿಡಿಯುತ್ತಲೇ ಇದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವರು ಅಪ್ಪು ಹೆಸರು ಬಳಸಿಕೊಳ್ಳುತ್ತಿರುವುದು ಅಭಿಮಾನಿಗಳ ಕಣ್ಣನ್ನು ಕೆಂಪಾಗಿಸಿದೆ. ಅಪ್ಪು ಸಾವಿನ ಬಳಿಕ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾದ ಅಪ್ಪು ಆತ್ಮದ ಜತೆ ಮಾತನಾಡಿದ್ದಾಗಿ ಚಾರ್ಲಿ ಚಿಟ್ವೆಂಡೆನ್ ಹಾಕಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಎದುರು ಭಾಗದಲ್ಲಿ ಸ್ಪೀಕರ್ ಮಾದರಿಯ ವಸ್ತುವೊಂದನ್ನು ಚಾರ್ಲಿ ಇಟ್ಟುಕೊಂಡಿದ್ದಾರೆ. ಕೈಯಲ್ಲಿ ನೋಟ್ಸ್ ಹಿಡಿದು ಪ್ರಶ್ನೆ ಕೇಳಿದ್ದಾರೆ. ನೀವು ನಿಮ್ಮ ಅಭಿಮಾನಿಗಳಿಗೆ ಏನು ಹೇಳುತ್ತೀರಿ ಎಂದು ಕೇಳಿದಾಗ, ಅವರು ಎಲ್ಲರನ್ನೂ ಪ್ರೀತಿಸುತ್ತೇನೆ (ಐ ಲವ್ ದೆಮ್) ಎಂದು ಹೇಳಿರುವ ಮಾತು ಕೇಳಿಸುತ್ತಿದೆ. ಅದೇ ರೀತಿ ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಅದಕ್ಕೆ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ನಡುವೆ ಹಾರ್ಟ್ ಫೇಲ್, ಡಾಕ್ಟರ್ ಡಾಕ್ಟರ್ ಎನ್ನುವ ಮಾತುಗಳು ಕೇಳಿಸುತ್ತಿದ್ದು, ಇವೆಲ್ಲವನ್ನೂ ಪುನೀತ್ ಅವರೇ ಮಾತನಾಡಿರುವುದಾಗಿ ಚಾರ್ಲಿ ಹೇಳಿದ್ದಾರೆ.
ಪುನೀತ್ ಸಾವಿನ ಬಳಿಕ ಇಂತಹ ವಿಡಿಯೋ ನೋಡಿದ ಪುನೀತ್ರ ಬಹುತೇಕ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ವಿಟಿಯೋದಲ್ಲಿ ಏನೂ ಕೇಳಿಸುತ್ತಿಲ್ಲ… ಮಿಸ್ ಯೂ ಅಪ್ಪು… ಎಂದು ಕಮೆಂಟ್ ಹಾಕಿದ್ದಾರೆ. ಬಹುತೇಕರು ಪುನೀತ್ ಆತ್ಮದ ಜತೆ ಮಾತನಾಡಿರುವುದಾಗಿ ಹೇಳಿಕೊಂಡ ವ್ಯಕ್ತಿಗೆ ಛೀಮಾರಿ ಹಾಕಿದ್ದಾರೆ. ಈ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಪವಾಡ ಬಯಲು ಮಾಡುವಲ್ಲಿ ನಿಸ್ಸೀಮರಾದ ಹುಲೀಕಲ್ ನಟರಾಜ್, ಇವೆಲ್ಲವೂ ಶುದ್ಧ ಸುಳ್ಳು, ಆತ್ಮದ ಜತೆ ಮಾತುಕತೆ ಸಾಧ್ಯವಿಲ್ಲ. ಇವೆಲ್ಲ ಕಣ್ಣುಕಟ್ಟು ವಿದ್ಯೆ ಎಂದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುವ ನಿಟ್ಟಿನಲ್ಲಿ ಖ್ಯಾತ ಚಿತ್ರನಟರ ಹೆಸರನ್ನು ಬಳಸಿಕೊಂಡು ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಹುಲೀಕಲ್ ಕಿಡಿಕಾರಿದ್ದಾರೆ. ಧ್ವನಿ ಬದಲಾವಣೆಯ ಸಾಧನ ಬಳಸಿಕೊಂಡು ಜನರನ್ನು ಮೋಸ ಮಾಡುತ್ತಿದ್ದಾರೆ. ಪುನೀತ್ ಅವರ ವಿಷಯದಲ್ಲಿಯೂ ಇದೇ ರೀತಿ ಆಗಿದೆ. ಯಾವುದೇ ಆತ್ಮ ಮಾತನಾಡಲಿಲ್ಲ. ಇಂಥ ಸುಳ್ಳು ವಿಡಿಯೋಗಳನ್ನು ಜನರು ನಂಬಬಾರದು ಎಂದು ಹುಲಿಕಲ್ ನಟರಾಜ್ ಹೇಳಿದ್ದಾರೆ.
ಈ ಹಿಂದೆ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮದ ಜತೆ ತಾವು ಮಾತನಾಡಿರುವುದಾಗಿ ಸ್ಟೀವ್ ಹಫ್ ಎಂಬಾತ ವಿಡಿಯೋ ಬಿಡುಗಡೆ ಮಾಡಿದ್ದ