ಪಾಕ್ ಆಟಗಾರರಿಗೆ ಅವಕಾಶ ಕೊಡದೆ ಬಿಸಿಸಿಐ ದುರಹಂಕಾರ ತೋರಿಸುತ್ತಿದೆ: ಇಮ್ರಾನ್ ಖಾನ್
ಇಸ್ಲಮಾಬಾದ್: ವರ್ಣರಂಜಿತ ಟಿ20 ಕ್ರಿಕೆಟ್ ಕೂಟ ಐಪಿಎಲ್ ನ ನೂತನ ಸೀಸನ್ ಶುಕ್ರವಾರ ಆರಂಭವಾಗಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿದೆ.
ಭಾರತವು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಲು ಅವಕಾಶ ನೀಡದಿರುವ ಬಗ್ಗೆ ಪಾಕ್ ಆಟಗಾರರು ಚಿಂತಿಸಬೇಕಾಗಿಲ್ಲ ಎಂದು ಪಾಕಿಸ್ತಾನದ ವಿಶ್ವಕಪ್ ವಿಜೇತ ನಾಯಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪಾಕ್ ಆಟಗಾರರು 2008ರ ಉದ್ಘಾಟನಾ ಕೂಟದಲ್ಲಿ ಭಾಗವಹಿಸಿದ್ದರು. ಆದರೆ ಮುಂಬೈ ದಾಳಿಯ ಬಳಿಕ ಪಾಕ್ ಆಟಗಾರರನ್ನು ಹೊರಗಿಡಲಾಯಿತು.
ಭಾರತೀಯ ಕ್ರಿಕೆಟ್ ಮಂಡಳಿಯು ಪಾಕಿಸ್ತಾನದ ಕ್ರಿಕೆಟ್ ಆಟಗಾರರ ಮೇಲೆ (ಐಪಿಎಲ್ ನಲ್ಲಿ ಕಾಣಿಸಿಕೊಳ್ಳಲು ಅವಕಾಶ ನೀಡದಿರುವ ಮೂಲಕ) ದ್ವೇಷ ಸಾಧಿಸುವುದು ನನಗೆ ವಿಚಿತ್ರವೆನಿಸುತ್ತದೆ. ಇದು ದುರಹಂಕಾರದ ನಡೆ ಎಂದಿದ್ದಾರೆ.
“ಭಾರತವು ಈಗ ಕ್ರಿಕೆಟ್ ಜಗತ್ತಿನಲ್ಲಿ ಸೂಪರ್ ಪವರ್ ಆಗಿ ಬಹಳಷ್ಟು ದುರಹಂಕಾರದಿಂದ ವರ್ತಿಸುತ್ತಿದೆ. ಏಕೆಂದರೆ ಇತರ ಯಾವುದೇ ದೇಶಗಳಿಗಿಂತ ಹೆಚ್ಚಿನ ಹಣವನ್ನು ಉತ್ಪಾದಿಸುವ ಸಾಮರ್ಥ್ಯ ಅವರಿಗಿದೆ, ಅವರು ಯಾರನ್ನು ಆಡಬೇಕು ಮತ್ತು ಯಾರನ್ನು ಆಡಬಾರದು ಎಂಬ ಸೂಪರ್ ಪವರ್ ನ ದುರಹಂಕಾರವನ್ನು ಅವರು ಈಗ ಪ್ರದರ್ಶಿಸುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಇಮ್ರಾನ್ ಹೇಳಿದರು.