ರಾಮನಗರದಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ರವಾನಿಸಿದ ಸಂದೇಶವೇನು?

ರಾಮನಗರದಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ರವಾನಿಸಿದ ಸಂದೇಶವೇನು?

ಬೆಂಗಳೂರು, ಡಿಸೆಂಬರ್ 31: ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯ ಬಿಡದಿ ಪುರಸಭೆಯ ಅಧಿಕಾರವನ್ನು ಜೆಡಿಎಸ್ ಉಳಿಸಿಕೊಂಡಿದೆ. ಆ ಮೂಲಕ ರಾಮನಗರ ಜಿಲ್ಲೆಯಲ್ಲಿ ಪ್ರಾಬಲ್ಯ ಕಳೆದುಕೊಂಡಿಲ್ಲ ಎಂಬ ಸಂದೇಶವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಡಿಕೆಶಿ ಬ್ರದರ್ಸ್‌ಗೆ ರವಾನಿಸಿದ್ದಾರೆ.

ರಾಮನಗರದಲ್ಲಿ ಜೆಡಿಎಸ್ ಪಕ್ಷವನ್ನು ಮಣಿಸಿ ಕಾಂಗ್ರೆಸ್ ಸಾಮ್ರಾಜ್ಯವನ್ನು ವಿಸ್ತರಿಸಬೇಕು ಎನ್ನುವ ಡಿಕೆಶಿ ಬ್ರದರ್ಸ್ ಕನಸಿಗೆ ಇದು ಸ್ವಲ್ಪ ಮಟ್ಟಿಗೆ ತಣ್ಣೀರು ಎರಚಿದಂತಾಗಿದೆ. ರಾಮನಗರದಲ್ಲಿ ಜೆಡಿಎಸ್‌ನ್ನು ಹಣಿಯಲು ಸರ್ವ ರೀತಿಯಲ್ಲಿಯೂ ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ರಾಮನಗರದಲ್ಲಿ ಜೆಡಿಎಸ್ ಇನ್ನಷ್ಟು ಸಂಘಟನೆ ಮಾಡಿ ಗಟ್ಟಿಯಾಗಿ ನೆಲೆಯೂರಲು ಹೋರಾಟ ಮಾಡಲೇಬೇಕಾಗಿದೆ.

ಈ ನಡುವೆ ರಾಜಕೀಯವಾಗಿ ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ನಡುವೆ ಹೋರಾಟಗಳು ಶುರುವಾಗಿದೆ. ಒಕ್ಕಲಿಗರ ಮತವನ್ನು ಸೆಳೆಯಲು ಡಿಕೆಶಿ ಬ್ರದರ್ಸ್ ಹಲವು ತಂತ್ರಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿರುವುದು ಮೇಕೆದಾಟು ಯೋಜನೆ ಪಾದಯಾತ್ರೆ. ಈ ಪಾದಯಾತ್ರೆಯನ್ನು ಮುಂದಿನ ಚುನಾವಣೆಯನ್ನು ಗಮದಲ್ಲಿಟ್ಟುಕೊಂಡು ನಡೆಸಲಾಗುತ್ತಿದೆ ಎಂಬುದು ಎಂತಹವರಿಗೂ ಗೊತ್ತಾಗುತ್ತಿದೆ.


ಗೌಡ್ರು ಎಂಟ್ರಿ ಕೊಟ್ರೆ ಏನಾಗಬಹುದು?

ಈ ಪಾದಯಾತ್ರೆಯನ್ನು ಜೆಡಿಎಸ್ ವಿರೋಧಿಸುತ್ತಲೇ ಬಂದಿದೆ. ಇದು ಮತಯಾತ್ರೆ ಎಂಬುದಾಗಿ ಕುಮಾರಸ್ವಾಮಿ ಅವರು ಟೀಕೆ ಮಾಡಿದ್ದಾರೆ. ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರ ಮಾತಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಕೊಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ದೇವೇಗೌಡರು ನೇರವಾಗಿ ಪ್ರಧಾನಿಯನ್ನೇ ಈ ವಿಚಾರವಾಗಿ ಒತ್ತಾಯಿಸುವುದು ಕಷ್ಟವಾಗಲಾರದು. ಇದು ಪಾದಯಾತ್ರೆ ಆಯೋಜಿಸಿರುವ ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲದ ವಿಚಾರವೇನಲ್ಲ.

ಆದರೀಗ ಪಾದಯಾತ್ರೆ ಮೂಲಕ ರಾಮನಗರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದೆ. ಈ ಸಂಬಂಧ ಅಲ್ಲಲ್ಲಿ ಪೂರ್ವಭಾವಿ ಸಭೆಗಳನ್ನು ಮಾಡಿ ಪಾದಯಾತ್ರೆಗೆ ಜನರನ್ನು ಸಂಘಟಿಸುತ್ತಿದೆ. ಈ ಪಾದಯಾತ್ರೆ ಮುಂದಿನ ಚುನಾವಣಾ ಅಖಾಡಕ್ಕೊಂದು ವೇದಿಕೆಯಾಗಲಿದೆ.

ಗೆಲುವಿಗೆ ಎಚ್‌ಡಿಕೆ ಹೋರಾಟ ಮಾಡಿದ್ದರು

ಬಿಡದಿ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್‌ನ್ನು ಸೋಲಿಸಿ ಅಧಿಕಾರ ಹಿಡಿಯುವ ಕಾಂಗ್ರೆಸ್‌ನ ಕನಸು ಭಗ್ನವಾಗಿದೆ. ಇಲ್ಲಿ ಜೆಡಿಎಸ್ ಬಹುಮತ ಪಡೆದಿದ್ದರೂ, ಕುಮಾರಸ್ವಾಮಿಯವರ ನಿರೀಕ್ಷೆಯಷ್ಟು ಸ್ಥಾನಗಳನ್ನು ಪಡೆದಿಲ್ಲ. ಖುದ್ದು ಕುಮಾರಸ್ವಾಮಿ ಅವರೇ ಬಿಡದಿಯಲ್ಲಿ ಠಿಕಾಣಿ ಹೂಡಿ ಪ್ರಚಾರ ನಡೆಸುವ ಮೂಲಕ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದನ್ನು ಇಲ್ಲಿ ನಾವು ನೋಡಬಹುದಾಗಿದೆ.

ಇನ್ನು ಒಕ್ಕಲಿಗರು ದೇವೇಗೌಡರ ಕುಟುಂಬದತ್ತ ಮೊದಲಿನಿಂದಲೂ ಒಲವು ತೋರುತ್ತಲೇ ಬಂದಿದ್ದಾರೆ. ಅದು ಜೆಡಿಎಸ್‌ಗೆ ವರದಾನವೂ ಹೌದು. ಹೀಗಿರುವಾಗ ಎಷ್ಟೇ ತಂತ್ರಗಳನ್ನು ಮಾಡಿದರೂ ಡಿ.ಕೆ. ಶಿವಕುಮಾರ್‌ಗೆ ಒಕ್ಕಲಿಗರ ನಾಯಕರಾಗಿ ಹೊರ ಹೊಮ್ಮುವುದು ಕಷ್ಟದ ಕೆಲಸವೇ.

ದೇವೇಗೌಡರು ಒಕ್ಕಲಿಗರ ಶಕ್ತಿ

ಕ್ಕಲಿಗರ ನಾಯಕರಾಗಿ ಹಿಂದಿನಿಂದಲೂ ದೇವೇಗೌಡರು ಬೆಳೆದು ಬಂದಿದ್ದಾರೆ. ಇವತ್ತಿಗೂ ಹೆಚ್ಚಿನವರು ಅವರತ್ತಲೇ ಒಲವನ್ನು ತೋರುತ್ತಿದ್ದಾರೆ. ಆದ್ದರಿಂದ ದೇವೇಗೌಡರ ಕುಟುಂಬದ ಮೇಲೆ ಆರೋಪ ಮಾಡಿ ಅದರ ಪರಿಣಾಮಗಳನ್ನು ಕಾಂಗ್ರೆಸ್ ನಾಯಕರು ಒಕ್ಕಲಿಗರ ಪ್ರಾಬಲ್ಯವಿರುವ ಕಡೆ ಎದುರಿಸಿದ್ದಾರೆ.

ದೇವೇಗೌಡರ ಕುಟುಂಬವನ್ನು ಟೀಕಿಸುತ್ತಲೇ ಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾರರು ಏನು ಮಾಡಿದರು ಎಂಬುದು ಗೊತ್ತೇ ಇದೆ.

ರಾಮನಗರದಲ್ಲಿ ಬಿಜೆಪಿ ಲೆಕ್ಕಕ್ಕಿಲ್ಲ

ಹಾಗೆ ನೋಡಿದರೆ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ದೇವೇಗೌಡರ ಬಗ್ಗೆ ಸೊಲ್ಲೆತ್ತದೆ ಜಾಣತನ ಮೆರೆಯುತ್ತಲೇ ಬರುತ್ತಿದ್ದಾರೆ. ರಾಮನಗರದಲ್ಲಿ ಬಿಜೆಪಿ ಲೆಕ್ಕಕ್ಕೆ ಇಲ್ಲದಂತಾಗಿದೆ. ಬಿಜೆಪಿ ನಾಯಕನಾಗಿ ಒಂದಷ್ಟು ಸದ್ದು ಮಾಡಿದ್ದ ಸಿ.ಪಿ. ಯೋಗೇಶ್ವರ್ ಈಗ ಮೌನಕ್ಕೆ ಶರಣಾಗಿದ್ದಾರೆ. ಮುಂದಿನ ಚುನಾವಣೆ ವೇಳೆಗೆ ಚಿತ್ತ ಬದಲಾಯಿಸಿದರೂ ಅಚ್ಚರಿ ಪಡಬೇಕಾಗಿಲ್ಲ.

ಸದ್ಯ ಹೋರಾಟಗಳು ಶುರುವಾಗಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯಾಗಿದ್ದು, ಹೋರಾಟದ ಮೊದಲ ಭಾಗದಲ್ಲಿ ಬಿಡದಿ ಪುರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಪ್ರಯತ್ನಪಟ್ಟರೂ ಜೆಡಿಎಸ್ ಬಿಟ್ಟು ಕೊಡದೆ ಉಳಿಸಿಕೊಂಡಿದೆ. ಒಟ್ಟು 23 ಸ್ಥಾನಗಳ ಪೈಕಿ ಜೆಡಿಎಸ್ 14 ಸ್ಥಾನ ಗಳಿಸಿ ಸಂಪೂರ್ಣ ಬಹುಮತದೊಂದಿಗೆ ಮೇಲುಗೈ ಸಾಧಿಸಿ ತೋರಿಸಿದೆ. ಇಲ್ಲಿ ಕಾಂಗ್ರೆಸ್ 9 ಸ್ಥಾನ ಪಡೆದಿದ್ದು ಸದ್ಯ ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳುವುದು ಅನಿವಾರ್ಯವಾಗಿದೆ.

ಡಿಕೆಶಿ- ಎಚ್‌ಡಿಕೆಯದು ಪ್ರತಿಷ್ಠೆಯ ಹೋರಾಟ ಈ ಫಲಿತಾಂಶ ಮುಂದಿನ ಹೋರಾಟಕ್ಕೆ ಆರಂಭದ ವೇದಿಕೆಯಾಗಿದ್ದು, ಮೇಲ್ನೋಟಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ರಾಜಕೀಯ ಸಮರದಂತೆ ಕಂಡುಬಂದರೂ, ಇದು ಡಿಕೆಶಿ ಮತ್ತು ಎಚ್‌ಡಿಕೆ ನಡುವೆ ನಡೆಯುತ್ತಿರುವ ರಾಜಕೀಯ ಅಸ್ತಿತ್ವದ ಹೋರಾಟ ಎನ್ನುವುದಂತು ಸತ್ಯ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.