ಜ್ಞಾನವಾಪಿಯ ಶಿವಲಿಂಗದ ರಕ್ಷಣೆ ಮುಂದುವರೆಸಿ ಎಂದು ಸುಪ್ರೀಂ ಆದೇಶ
ನವದೆಹಲಿ: ಇತ್ತೀಚೆಗಷ್ಟೆ ವಾರಾಣಸಿಯ ಜ್ಞಾನವಾಪಿ ಮಸೀದಿ ಇಡೀ ದೇಶದಲ್ಲೇ ತಲ್ಲಣ ಸೃಷ್ಟಿಸಿತ್ತು. ಅಲ್ಲಿ ಪುರಾತತ್ವ ಇಲಾಖೆಗೆ ಸಿಕ್ಕಿದ್ದು ಶಿವಲಿಂಗವೋ ಅಲ್ಲವೋ ಎಂಬ ಪ್ರಶ್ನೆ ವಿವಾದವನ್ನೇ ಹುಟ್ಟು ಹಾಕಿತ್ತು. ಇದೇ ಜ್ಞಾನವಾಪಿ ಪ್ರಕರಣದಿಂದಾಗಿ ನೂಪುರ್ ಶರ್ಮಾ ಜಗತ್ತಿನಾದ್ಯಂತ ಮುಸಲ್ಮಾನರ ವಿರೋಧ ಕಟ್ಟಿಕೊಂಡದ್ದು.
ಈಗ ಸುಪ್ರೀಂ ಕೋರ್ಟ್, ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದಲ್ಲಿ ಸಿಕ್ಕ ಶಿವಲಿಂಗದ ರಕ್ಷಣೆ ಆದೇಶವನ್ನು ಮುಂದುವರೆಸಿದೆ. ಈ ಆದೇಶ ಮುಂದಿನ ಆದೇಶ ಬರುವವರೆಗೆ ಚಾಲ್ತಿಯಲ್ಲಿ ಇರಲಿದೆ ಎಂದು ಸಿಜೆಐ ಚಂದ್ರಚೂಡ, ಜಸ್ಟೀಸ್ ಸೂರ್ಯ ಕಾಂತ, ಜಸ್ಟೀಸ್ ಪಿಎಸ್ ನರಸಿಂಹ ಇದ್ದ ತ್ರಿಸದಸ್ಯ ಪೀಠ ಹೇಳಿದೆ. ಜೊತೆಗೆ, ಅಂಜುಮಾನ್ ಇಂತೆಝಾಮಿಯಾ ಮಸೀದಿ, ಅಲ್ಲಾಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗೆ ತಮ್ಮ ಉತ್ತರವನ್ನು ಮೂರು ವಾರಗಳ ಒಳಗಾಗಿ ಸಲ್ಲಿಸುವಂತೆ ಹಿಂದು ಪರ ಪಕ್ಷದವರಿಗೆ ನಿರ್ದೇಶಿಸಿದೆ.
ಮೇ 17 ರಂದು ಸರ್ವೋಚ್ಚ ನ್ಯಾಯಾಲಯ ವಾರಾಣಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಶಿವಲಿಂಗ ಕಂಡುಬಂದ ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಮಧ್ಯಂತರ ಆದೇಶವನ್ನು ನೀಡಿತ್ತು.
ಮೇ 20 ರಂದು ಸುಪ್ರೀಂ ಕೋರ್ಟ್ ಪ್ರಕರಣದ ಸಂಕೀರ್ಣತೆ ಮತ್ತು ಸೂಕ್ಷ್ಮತೆಯನ್ನು ಗಮನದಲ್ಲಿ ಇಟ್ಟುಕೊಂಡು ಹಿಂದೂ ಭಕ್ತರು ಸಲ್ಲಿಸಿದ ಸಿವಿಲ್ ಮೊಕದ್ದಮೆಯನ್ನು ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರಿಂದ ವಾರಾಣಸಿಯ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಿತ್ತು. 25-30 ವರ್ಷಕ್ಕಿಂತ ಹೆಚ್ಚು ಅನುಭವವಿರುವ ಹಿರಿಯ ನ್ಯಾಯಾಧೀಶರು ಈ ಪ್ರಕರಣವನ್ನು ನಿಭಾಯಿಸ ಬೇಕು ಎಂದು ಹೇಳಿತ್ತು. (ಏಜೆನ್ಸೀಸ್)