ಗುರು ರಾಘವೇಂದ್ರ ಬ್ಯಾಂಕ್ ಹಗರಣ: ಸಿಬಿಐ ತನಿಖೆಗೆ ಸರ್ಕಾರ ನಿರ್ಧಾರ
ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಸೊಸೈಟಿ ಸೇರಿದಂತೆ ಮೂರು ಕೋ-ಆಪರೇಟಿವ್ ಬ್ಯಾಂಕ್‌ಗಳ ಹಗರಣ ಪ್ರಕರಣವನ್ನು ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರಿಯಾ ತನಿಖಾ ದಳಕ್ಕೆ (ಸಿಬಿಐ) ವರ್ಗಾವಣೆ ಮಾಡಲು ನಿರ್ಧಾರ ಮಾಡಿದೆ. ಇದು ಮೂರು ಕೋ-ಆಪರೇಟಿವ್ ಬ್ಯಾಂಕ್‌ಗಳು ಸೇರಿ ನಡೆಸಿರುವ ಸುಮಾರು 1800 ಕೋಟಿ ರೂಪಾಯಿಯ ವಂಚನೆ ಪ್ರಕರಣವಾಗಿದೆ.
ನಕಲಿ ದಾಖಲೆಯನ್ನು ಸೃಷ್ಟಿ ಮಾಡಿ, ಗ್ರಾಹಕರಿಗೆ ಹಾಗೂ ಠೇವಣಿದಾರರಿಗೆ ಈ ಮೂರು ಕೋ-ಆಪರೇಟಿವ್ ಬ್ಯಾಂಕುಗಳು ಮೋಸವನ್ನು ಮಾಡಿದೆ. ಗುರುರಾಘವೇಂದ್ರ ಕೋ-ಆಪರೇಟಿವ್ ಸೊಸೈಟಿ, ವಸಿಷ್ಠ ಕೋ-ಆಪರೇಟಿವ್ ಸೊಸೈಟಿ, ಗುರುರಾಘವೇಂದ್ರ ಸೌಹಾರ್ದ ಸೊಸೈಟಿಯ ಹಗರಣ ಇದಾಗಿದೆ. ಈ ಹಗರಣ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗುವುದು ಎಂದು ವಿಧಾನಸೌಧದಲ್ಲಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಈ ಸೊಸೈಟಿಗಳಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆ, ಸಾಲ ವಸೂಲಾತ ಬಗ್ಗೆ ಸ್ಥಳೀಯ ಶಾಸಕರು, ವಿಧಾನ ಸಭೆ ಪರಿಷತ್ ಸದಸ್ಯರಗಳ ಜೊತೆ ಮಂಗಳವಾರ ಸಭೆ ನಡೆಸಲಾಗಿದೆ. ಈ ಸಭೆ ಬಳಿಕ ಮಾಧ್ಯಮಕ್ಕೆ ಮಾಹಿತಿ ನೀಡಿದ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಈ ತನಿಖೆಯನ್ನು ಸಿಬಿಐಗೆ ವಹಿಸಲು ಶಿಫಾರಸು ಮಾಡಲಾಗುವುದು ಎಂದು ತಿಳಿಸಿದ್ದಾರೆ.
"ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಸೊಸೈಟಿ ಮತ್ತು ವಶಿಷ್ಟ ಸೌಹಾರ್ದ ಸಹಕಾರಿ ಬ್ಯಾಂಕ್‌ಗಳಲ್ಲಿ ವಂಚನೆ ನಡೆದಿರುವ ಬಗ್ಗೆ ಮೂರು ವರ್ಷಗಳಿಂದ ತನಿಖೆ ನಡೆಯುತ್ತಿದೆ. ಆದರೂ ಇನ್ನೂ ಕೂಡಾ ಸಾಲ ವಸೂಲಾತಿ ಆಗಿಲ್ಲ. ಅದಕ್ಕಾಗಿ ಈಗ ಸಿಬಿಐಗೆ ವಹಿಸಲು ಸಂಪುಟ ನಿರ್ಧಾರ ಮಾಡಿದೆ," ಎಂದು ಎಸ್ ಟಿ ಸೋಮಶೇಖರ್ ಮಾಹಿತಿ ನೀಡಿದ್ದಾರೆ.
ಸಿಬಿಐ ತನಿಖೆಗೆ ಈ ಹಿಂದೆಯೇ ಒತ್ತಾಯ
ಈ ಹಿಂದೆ ಈ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಬೇಕು ಎಂದು ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಷೇರುದಾರರು ಹಾಗೂ ಠೇವಣಿದಾರರ ಹಿತರಕ್ಷಣಾ ವೇದಿಕೆಯು ಆಗ್ರಹ ಮಾಡಿತ್ತು. ಹಗರಣ ಬೆಳಕಿಗೆ ಬಂದು ಎರಡು ವರ್ಷವಾದರೂ ಇನ್ನೂ ಕೂಡಾ ಯಾವುದೇ ಬೆಳವಣಿಗೆಗಳು ಕಂಡು ಬಂದಿಲ್ಲ. ಹೂಡಿಕೆದಾರರ ಹಣ ಮರುವಸೂಲಿಯಾಗಿಲ್ಲ ಎಂದು ಕಳೆದ ವರ್ಷ ಹಿತರಕ್ಷಣಾ ವೇದಿಕೆಯು ಅಸಮಾಧಾನ ವ್ಯಕ್ತಪಡಿಸಿತ್ತು.
"ಗುರುಸಾರ್ವಭೌಮ ಸೊಸೈಟಿಯಲ್ಲಿ 270 ಕೋಟಿ ರೂ. ಹಗರಣ, ವಸಿಷ್ಠ ಸೌಹಾರ್ದ ಸೊಸೈಟಿಯಲ್ಲಿ ಸುಮಾರು 500 ಕೋಟಿ ರೂ. ಹಗರಣ, ಗುರು ರಾಘವೇಂದ್ರ ಕೋ - ಆಪರೇಟಿವ್ ಬ್ಯಾಂಕಿನಲ್ಲಿ 2,400 ಕೋಟಿ ರೂ. ಹಗರಣ, ಕಣ್ವ ಸೌಹಾರ್ದ ಸೊಸೈಟಿಯಲ್ಲಿ ನೂರು ಕೋಟಿ ರೂ. ಹಗರಣ, ನಾಗರತ್ನ ಸೌಹಾರ್ದ ಸೊಸೈಟಿಯಲ್ಲಿ 150 ಕೋಟಿ ರೂ. ಹಗರಣ ನಡೆದಿದೆ," ಎಂದು ಆರೋಪ ಮಾಡಿದ್ದ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಷೇರುದಾರರು ಹಾಗೂ ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮುಖ್ಯಸ್ಥರಾದ ಡಾ. ಶಂಕರ ಗುಹಾ ದ್ವಾರಕನಾಥ್ ಬೆಳ್ಳೂರು ಈ ಬಗ್ಗೆ ಸರ್ಕಾರ ಮಾತನಾಡುತ್ತಿಲ್ಲ ಎಂದಿದ್ದರು.