ಕೊವಾಕ್ಸಿನ್ ಜತೆಗೇ ಕೋವಿ ಶೀಲ್ಡ್ ಪಡೆದ ಮಹಿಳೆ ; ನರ್ಸ್ಗಳಿಗೆ ನೋಟೀಸ್

ಪಟನಾ: ಕೋವಿಶೀಲ್ಡ್ ಲಸಿಕೆಯ ಮೊದಲನೇ ಡೋಸೇಜ್ ತೆಗೆದುಕೊಂಡ ನಂತರ ಎರಡನೇ ಡೋಸೇಜ್ಗೆ 84 ದಿನಗಳು ಆಗಿರಬೇಕೆನ್ನುವ ನಿಯಮವಿದೆ. ಹಾಗೆಯೇ ಕೋವಿಶೀಲ್ಡ್ ಪಡೆದವರು ಕೊವ್ಯಾಕ್ಸಿನ್ ಪಡೆಯುವಂತಿಲ್ಲ ಎನ್ನುವ ನಿಯಮವೂ ಇದೆ. ಆದರೆ ಇಲ್ಲಿ ನರ್ಸ್ಗಳು ಮಾಡಿರುವ ತಪ್ಪಿಗೆ ಮಹಿಳೆಯೊಬ್ಬಳು ಕೋವಿಶೀಲ್ಡ್ ಲಸಿಕೆ ಪಡೆದ ಕೇವಲ ಐದು ನಿಮಿಷಗಳಲ್ಲಿ ಕೊವ್ಯಾಕ್ಸಿನ್ ಲಸಿಕೆ ಪಡೆದಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಗ್ರಾಮೀಣ ಪಟನಾದ ಪುನ್ಪುನ್ ಬ್ಲಾಕ್ನಲ್ಲಿರುವ ಹಳ್ಳಿಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಜೂನ್ 16ರಂದು ಸುನೀಲಾ ದೇವಿ ಹೆಸರಿನ ಮಹಿಳೆ ಕರೊನಾ ಲಸಿಕೆ ಪಡೆಯಲೆಂದು ಲಸಿಕಾ ಕೇಂದ್ರಕ್ಕೆ ತೆರಳಿದ್ದಾಳೆ. ಅಲ್ಲಿ ರಿಜಿಸ್ಟರ್ ಮಾಡಿದ ನಂತರ ನರ್ಸ್ ಒಬ್ಬರು ಆಕೆಗೆ ಕೋವಿಶೀಲ್ಡ್ ಲಸಿಕೆ ನೀಡಿದ್ದಾರೆ. ಲಸಿಕೆ ಪಡೆದ ನಂತರ ಐದು ನಿಮಿಷ ಕುಳಿತುಕೊಳ್ಳಬೇಕು, ಇಲ್ಲೇ ಕುಳಿತುಕೊಳ್ಳಿ ಎಂದು ಹೇಳಿ ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ವಿಶ್ರಾಂತಿ ಪಡೆಯುತ್ತ ಕುಳಿತಿದ್ದ ಮಹಿಳೆಯ ಬಳಿ ಬಂದ ಇನ್ನೊಬ್ಬ ನರ್ಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಮಹಿಳೆಗೆ ನೀಡಲು ಮುಂದಾಗಿದ್ದಾರೆ. ಇಲ್ಲ, ನಾನು ಈಗಾಗಲೇ ಲಸಿಕೆ ತೆಗೆದುಕೊಂಡಾಯಿತು ಎಂದರೂ ಕೇಳದ ನರ್ಸ್ ಈ ಲಸಿಕೆಯನ್ನೂ ತೆಗೆದುಕೊಳ್ಳಬೇಕು ಎಂದು ಹೇಳಿ ಲಸಿಕೆ ಚುಚ್ಚಿದ್ದಾಳೆ. ಈ ವಿಚಾರ ಎಲ್ಲೆಡೆ ಸುದ್ದಿಯಾಗಿದೆ. ಈ ರೀತಿ ನನಗೆ ಎರಡೆರೆಡು ಲಸಿಕೆ ನೀಡಿದ ಆರೋಗ್ಯ ಸಿಬ್ಬಂದಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಸುನೀಲಾ ದೇವಿ ಒತ್ತಾಯಿಸಿದ್ದಾರೆ. ಅಂದು ಅಲ್ಲಿ ಕೆಲಸ ಮಾಡಿದ್ದ ಚಂಚಲ ದೇವಿ ಮತ್ತು ಸುನೀತಾ ಕುಮಾರಿ ಹೆಸರಿನ ನರ್ಸ್ಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಸದ್ಯ ಸುನೀಲಾ ದೇವಿಯನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿಡಲಾಗಿದೆ.