ಕೊಡಗಿನಲ್ಲಿ ಜೇನು ದಾಳಿಗೆ ಇಬ್ಬರು ಬಲಿ

ಕೊಡಗಿನಲ್ಲಿ ಜೇನು ದಾಳಿಗೆ ಇಬ್ಬರು ಬಲಿ

ಕೊಡಗು : ಕೊಡಗು ಜಿಲ್ಲೆಯಲ್ಲಿ ಶನಿವಾರ ಎರಡು ಪ್ರತ್ಯೇಕ ಘಟನೆಗಳಲ್ಲಿ ಹೆಜ್ಜೇನು ದಾಳಿಯಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೃತರನ್ನು ಹುಲಿತಾಳದ ಅಶ್ವಿನ್ ಕುಮಾರ್ (45) ಮತ್ತು ಗೋಣಿಕೊಪ್ಪದ ಬಡಗರಕೇರಿಯ ವೇಲು (80) ಎಂದು ಗುರುತಿಸಲಾಗಿದೆ.ಅಶ್ವಿನ್ ಕುಮಾರ್ ಅವರ ಸಹೋದರನ ಜಮೀನಿನಲ್ಲಿ ಮೂಲಂಗಿ ಕಟಾವು ಮಾಡುತ್ತಿದ್ದಾಗ ಜೇನುನೊಣಗಳ ಹಿಂಡು ಅವರ ಮೇಲೆ ದಾಳಿ ಮಾಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಗಾಯಗೊಂಡಿರುವ ಅವರ ಸಹೋದರಿ ಚೇತರಿಸಿಕೊಳ್ಳುತ್ತಿದ್ದಾರೆ.

ಮತ್ತೊಂದು ಘಟನೆಯಲ್ಲಿ, ವೇಲು ಮತ್ತು ಅವರ ಪತ್ನಿ ಲಕ್ಷ್ಮಿ ಅವರು ಬಡಗರಕೇರಿಯಲ್ಲಿ ತಮ್ಮ ಕೆಲಸದ ಸ್ಥಳಕ್ಕೆ ತೆರಳುತ್ತಿದ್ದಾಗ ಜೇನುನೊಣಗಳ ಹಿಂಡು ದಾಳಿ ಮಾಡಿದೆ. ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೇಲು ಮೃತಪಟ್ಟಿದ್ದು, ಲಕ್ಷ್ಮಿ ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.