ಕೊಟ್ಟಾರೆ ಕೊಡು, ಮೋದಿಯಂಥ ದೊರೆ: ಸಂಕಷ್ಟದಲ್ಲಿರುವ ಪಾಕಿಸ್ಥಾನ ನಾಗರಿಕರ ಬೇಡಿಕೆ

ಕೊಟ್ಟಾರೆ ಕೊಡು, ಮೋದಿಯಂಥ ದೊರೆ: ಸಂಕಷ್ಟದಲ್ಲಿರುವ ಪಾಕಿಸ್ಥಾನ ನಾಗರಿಕರ ಬೇಡಿಕೆ

ಸ್ಲಾಮಾಬಾದ್‌: “ಮೋದಿಯಂಥ ನಾಯಕನಿದ್ದಿದ್ದರೆ ಇಂದು ನಮ್ಮ ಮಕ್ಕಳು ಹಸಿದ ಹೊಟ್ಟೆಯಲ್ಲಿ ಮಲಗುತ್ತಿರಲಿಲ್ಲ. ಕನಿಷ್ಠ ಹೊಟ್ಟೆ ತುಂಬ ಊಟ ಬಡಿಸಲು ಸಾಧ್ಯವಾಗುತ್ತಿತ್ತು! ಪಾಕ್‌ ಸರಕಾರ ತಂದಿಟ್ಟಿರುವ ಪರಿಸ್ಥಿತಿಯಿಂದ ನಾವು ಪಾಕ್‌ನಲ್ಲಿ ಹುಟ್ಟಿದ್ದೇ ತಪ್ಪು ಎಂದೆನಿಸುತ್ತಿದೆ.

ಮೋದಿ ತರಹದ ನಾಯಕನನ್ನು ನೀಡು ಎಂದು ಅಲ್ಲಾನಲ್ಲಿ ಬೇಡಿಕೊಳ್ಳುತ್ತೇವೆ’.

ಇದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಜರ್ಝರಿತವಾಗಿರುವ ಪಾಕಿಸ್ಥಾನದ ಜನರ ಭಾವುಕ ಮಾತುಗಳು! ತೆರಿಗೆ ಹೆಚ್ಚಳ, ಬೆಲೆ ಏರಿಕೆ, ಆಹಾರ ಬಿಕ್ಕಟ್ಟಿನಂಥ ಬರೆಗಳು ಒಂದರ ಮೇಲೆ ಒಂದರಂತೆ ಜನರ ಮೇಲೆ ಬೀಳುತ್ತಿವೆ. ಜನರ ಸಂಕಷ್ಟಗಳನ್ನು ಆಲಿಸಲೆಂದು ಪಾಕ್‌ ಯೂಟ್ಯೂಬರ್‌ ಸನಾ ಅಮ್ಜದ್‌ ಜನರ ಪ್ರತಿಕ್ರಿಯೆ ಸಂಗ್ರಹದ ವೀಡಿಯೋ ಒಂದನ್ನು ಮಾಡಿದ್ದು, ಈ ವೇಳೆ ಪಾಕ್‌ ಪ್ರಜೆಯೊಬ್ಬರು ಈ ರೀತಿ ಹೇಳಿಕೆ ನೀಡಿದ್ದಾರೆ. ಪಾಕಿಸ್ಥಾನ ಭಾರತದಿಂದ ವಿಭಜನೆಗೊಳ್ಳಲೇಬಾರದಿತ್ತು. ನಾವು ಕನಿಷ್ಠ ಅಗತ್ಯ ಸಾಮಗ್ರಿಗಳನ್ನಾದರೂ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳ ಬಹುದಿತ್ತು. ಮೋದಿ ಭಾರತವನ್ನು ಮುನ್ನಡೆಸುವಂತೆ, ಪಾಕ್‌ ಅನ್ನು ಆಡಳಿತ ಮಾಡಿದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನವಾಜ್‌ ಷರೀಫ್, ಭುಟ್ಟೋ, ಇಮ್ರಾನ್‌, ಶೆಹಬಾಜ್‌ ಈ ಯಾವ ನಾಯಕರೂ ನಮಗೆ ಬೇಕಿಲ್ಲ. ಮೋದಿ ಅಂಥ ಓರ್ವ ದಿಟ್ಟ ನಾಯಕ ಬೇಕು ಎಂದು ಹೇಳಿದ್ದಾರೆ. ಐಎಸ್‌ಎ ಅನುದಾನ ಕಡಿತ: ಹಣದ ಕೊರತೆ ಹಿನ್ನೆಲೆ ಪಾಕಿಸ್ಥಾನ ಸರಕಾರ ಗುಪ್ತಚರ ಇಲಾಖೆ, ತನಿಖಾ ಸಂಸ್ಥೆಗಳಿಗೆ ನೀಡುತ್ತಿರುವ ಅನುದಾನ ಕಡಿತಗೊಳಿಸಲು ನಿರ್ಧರಿಸಿದೆ.

ಭಯೋತ್ಪಾದನೆಯನ್ನು ಉದ್ಯಮವಾಗಿಸಿಕೊಂಡಿರುವ ಯಾವುದೇ ದೇಶ ಎಂದಿಗೂ ಸಮಸ್ಯೆಗಳಿಂದ ಹೊರಬಂದು, ಸಮೃದ್ಧವಾಗಲು ಸಾಧ್ಯವಿಲ್ಲ. ಪಾಕ್‌ ವಿಚಾರದಲ್ಲಿ ನಾವು ಕೈಗೊಳ್ಳುವ ಯಾವುದೇ ದೊಡ್ಡ ನಿರ್ಣಯ ನಮ್ಮ ದೇಶದ ಜನರ ಭಾವನೆಗಳ ನಾಡಿಮಿಡಿತವನ್ನು ಆಧರಿಸಿರುತ್ತದೆ.
ಎಸ್‌.ಜೈಶಂಕರ್‌, ವಿದೇಶಾಂಗ ಸಚಿವ

ಬ್ಯುಸಿನೆಸ್‌ ಕ್ಲಾಸ್‌ ಪ್ರಯಾಣ ರದ್ದು
ಪಾಕಿಸ್ಥಾನದ ಸಚಿವರು ವಿದೇಶಗಳಿಗೆ ಇನ್ನು ಮುಂದೆ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುವಂತಿಲ್ಲ ಅಥವಾ ಪಂಚತಾರಾ ಹೊಟೇಲ್‌ಗ‌ಳಲ್ಲಿ ಉಳಿಯುವಂತಿಲ್ಲ. ಸದ್ಯದ ಸಮಯ ನಮ್ಮಿಂದ ತಾಳ್ಮೆ, ತ್ಯಾಗ, ಸರಳತೆ ಬಯಸುತ್ತಿದೆ. ನಾವೆಲ್ಲರೂ ಅದೇ ರೀತಿ ಇರಬೇಕು ಎಂದು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್ ಸಚಿವ ಸಂಪುಟ ಸಭೆಯಲ್ಲಿ ಸಚಿವರಿಗೆ ಮನವಿ ಮಾಡಿದ್ದಾರೆ.