ಕುಷ್ಟಗಿ ಕ್ಷೇತ್ರಕ್ಕೆ ಬಸವರಾಜ್ ಹಳ್ಳೂರಗೆ ಗಾಳ ಹಾಕಿದ ಜನಾರ್ದನ ರೆಡ್ಡಿ

ಕುಷ್ಟಗಿ:ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಗಾಲಿ ಜನಾರ್ದನ ರೆಡ್ಡಿ ಅವರ ಕರ್ನಾಟಕ ರಾಜ್ಯ ಪ್ರಗತಿ ಪಕ್ಷಕ್ಕೆ ವೀರಶೈವ ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಗಾಳ ಹಾಕಿದ್ದು,ಕುಷ್ಟಗಿ ಕ್ಷೇತ್ರದಲ್ಲಿ ರೆಡ್ಡಿ ಪಕ್ಷ ಇದೀಗ ಮುನ್ನೆಲೆಗೆ ಬಂದಿದೆ.ಈಗಾಗಲೇ ಜೆಡಿಎಸ್ ತುಕಾರಾಮ್ ಸುರ್ವೆ ತನ್ನ ಅಭ್ಯರ್ಥಿ ಎಂದು ಪ್ರಕಟಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅಭ್ಯರ್ಥಿಗಳೆಂದು ಪ್ರಕಟಿಸುವುದು ಬಾಕಿ ಇದೆ.
ಇಂತಹ ಸಂಧರ್ಭದಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರು ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಪಕ್ಕದ ಕ್ಷೇತ್ರ ಕುಷ್ಟಗಿಯಲ್ಲಿಯೂ ರೆಡ್ಡಿ ಪಕ್ಷ ಕೆಲವು ದಿನಗಳಿಂದ ಸದ್ದು ಮಾಡಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗೆ ವೀರಶೈವ ಲಿಂಗಾಯತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತಂತ್ರಗಾರಿಕೆ ಇದಾಗಿದೆ. ಈ ಸಮುದಾಯದವರು ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿ ಧ್ರುವೀಕರಣಗೊಂಡಿದ್ದು, ಇದರ ಮುಂದುವರಿದ ಭಾಗವಾಗಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಬಸವರಾಜ ಹಳ್ಳೂರು ಅವರನ್ನು ಸಂಪರ್ಕಿಸಿದ್ದು, ಸ್ಪಷ್ಟ ಅಭಿಪ್ರಾಯ ತಿಳಿಸಲು ಜ.3 ರವರೆಗೆ ಗಡುವು ವಿಧಿಸಿದ್ದಾರೆ.