ಕಿಡ್ನಾಪ್ ಮಾಡಿ ಪೀಕಿದ ಹಣದಲ್ಲಿ ದೇವರಿಗೂ ಪಾಲು ನೀಡಿದರು!

ಮೈಸೂರು: ಮೈಸೂರಿನಲ್ಲೊಂದು ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದ್ದು ಕಿಡ್ನ್ಯಾಪ್ ಮಾಡಿದ್ದವರು ದೇವರಿಗೂ ಪೀಕಿದ ಹಣದಲ್ಲಿ ಪಾಲು ನೀಡಿದ್ದಾರಂತೆ!
ಈ ಖತರ್ನಾಕ್ ಗ್ಯಾಂಗ್ನವರು, ದೇವರಿಗೇ ಲಂಚ ಕೊಟ್ಟಿದ್ದಾರೆ. ಇವರು ತಂದೆ-ಮಗು ಕಿಡ್ನಾಪ್ ಪ್ರಕರಣದಲ್ಲಿ ಬಂಧಿತರಾದಾಗ ವಿಚಾರ ಬೆಳಕಿಗೆ ಬಂದಿದೆ.
ಈ ಕಿಡ್ನ್ಯಾಪ್ ಪ್ರಕರಣ ನಂಜನಗೂಡಿನಲ್ಲಿ ಫೆ.6ರಂದು ನಡೆದಿತ್ತು. ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹರ್ಷ ಇಂಪೆಕ್ಸ್ ಫ್ಯಾಕ್ಟರಿ ಮಾಲೀಕ ದೀಪಕ್ ಹಾಗೂ ಅವರ ಪುತ್ರ ಹರ್ಷನನ್ನು ಈ ಗ್ಯಾಂಗ್ ಅಪಹರಿಸಿತ್ತು. ಉದ್ಯಮಿ ಮೊಬೈಲ್ ಫೋನ್‌ನಿಂದಲೇ ಕುಟುಂಬಸ್ಥರಿಗೆ ಕಾಲ್ ಮಾಡಿದ್ದ ಆರೋಪಿಗಳು 1 ಕೋಟಿ ರೂ.ಗೆ ಡಿಮಾಂಡ್ ಮಾಡಿದ್ದರು.
ಈ ಸಂದರ್ಭ ಆರೋಪಿಗಳು 35 ಲಕ್ಷ ರೂ. ವಸೂಲಿ ಮಾಡಿದ್ದರು. ನಂತರ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂದರ್ಭ ತ್ವರಿತವಾಗಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಮೂರು ತಂಡ ರಚಿಸಿ ಪ್ರಕರಣ ಭೇದಿಸಿದ್ದರು. ಕಾರ್ಯಾಚರಣೆ ವೇಳೆ 10 ಆರೋಪಿಗಳ ಬಂಧಿಸಲಾಗಿದೆ.
ಮಂಡ್ಯ ಮೂಲದ ಆರೋಪಿ ನಂ1, ಕೊಲೆ ಪ್ರಕರಣದಲ್ಲಿ 11 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಈತ ತನ್ನ ಸ್ನೇಹಿತರ ಟೀಮ್ ಮಾಡಿಕೊಂಡು ಕಿಡ್ನಾಪ್ ಮಾಡಿ ಮತ್ತೆ ಜೈಲು ಪಾಲಾಗಿದ್ದಾನೆ. ಪ್ರಕರಣಕ್ಕೆ ಬಳಸಿದ್ದ ಕಾರು, ಮೂರು ದ್ವಿಚಕ್ರ ವಾಹನ, 5 ಡ್ರಾಗರ್, 3 ಲಾಂಗ್, 11 ಮೊಬೈಲ್ ಫೋನ್ಅನ್ನು ಪೊಲೀಶರು ವಶಕ್ಕೆ ಪಡೆದಿದ್ದಾರೆ. 21 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ತನಿಖೆ ವೇಳೆ ಈ ಆರೋಪಿಗಳು, ಅನೇಕ ದೇವಾಯಲಯಗಳ ಹುಂಡಿಗೆ 50-40 ಸಾವಿರ ರೂ. ಹಣವನ್ನು ಹಾಕಿರುವುದಾಗಿ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಮೈಸೂರು ಎಸ್ಪಿ ಸೀಮಾ ಲಾಟ್ಕರ್, ಪ್ರಕರಣದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.