ಕುಷ್ಟಗಿ: ಕಳಪೆ ಅಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ; ಶಾಸಕ ಪಾಟೀಲ ಭೇಟಿ
ಕುಷ್ಟಗಿ: ಕುಷ್ಟಗಿ ತಾಲೂಕಿನ ನಿಡಶೇಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಳಪೆ ಅಹಾರ ಸೇವಿಸಿ ಅಸ್ವಸ್ಥರಾದ ಪ್ರಕರಣದ ಹಿನ್ನೆಲೆಯಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಸದರಿ ಶಾಲೆ ಭೇಟಿ ಮಾಡಿ ವಾಸ್ತವಾಂಶ ಪರಿಶೀಲಿಸಿದರು.
ಬೆಳಗ್ಗೆ ಶಾಲೆಯವರಿಗೆ ಸೂಚನೆ ತಿಳಿಸದೇ ಭೇಟಿ ನೀಡಿದ ಶಾಸಕರು, ವಿದ್ಯಾರ್ಥಿಗಳ ಅಹವಾಲು ಆಲಿಸಿದರು.
ಈ ಸಂದರ್ಭ ಶಾಸಕರು, ನೀವು ನಿಮ್ಮ ಮನೆಯಲ್ಲಿ ನಿಮ್ಮ ಮಕ್ಕಳಿಗೆ ಈ ರೀತಿಯ ಅಹಾರ ತಯಾರಿಸುತ್ತಿರಲಿಲ್ಲ. ಇಲ್ಲಿನ ವಿದ್ಯಾರ್ಥಿಗಳು ನಿಮ್ಮ ಮಕ್ಕಳಲ್ಲವೇ ಎಂದ ಅಡುಗೆಯವರ ನಿಷ್ಕಾಳಜಿಗೆ ತರಾಟೆಗೆ ತೆಗೆದುಕೊಂಡರು.
ಅಡುಗೆಯವರಿಗೆ ಪ್ರತಿನಿತ್ಯ ತಪ್ಪದೇ 6 ಗಂಟೆಗೆ ಬರಬೇಕು. ಪ್ರತಿ ದಿನ ಗುಣಮಟ್ಟದ ಹಾಗೂ ಶುಚಿ, ರುಚಿಯಾದ ಅಹಾರ ತಯಾರಿಸಲು ಸೂಚಿಸಿ, ಇಂತಹ ಪ್ರಕರಣಗಳು ಮರುಕಳಿಸದಂತೆ ತಾಕೀತು ಮಾಡಿದರು.
ಮಕ್ಕಳ ದೈಹಿಕ ಸಾಮರ್ಥ್ಯ ಅನುಸಾರ ಅಹಾರ ನೀಡಬೇಕು. ವಿದ್ಯಾರ್ಥಿಗಳು ಹೊಟ್ಟೆ ತುಂಬ ನೀಡದಿದ್ದರೆ ಸರಿಯಾಗಿ ಅಭ್ಯಾಸ ಮಾಡುವುದಿಲ್ಲ. ಅರೆ ಹೊಟ್ಟೆ ಊಟ ನೀಡದಿರಿ. ಸರ್ಕಾರ ಏನೂ ಕಡಿಮೆ ಮಾಡಿಲ್ಲ. ವಿದ್ಯಾರ್ಥಿಗಳಿಗೆ ಓದುವ ಪೂರಕ ವಾತವರಣ ನಿರ್ಮಿಸಲು ಪ್ರಾಚಾರ್ಯ ವಿಜಯಕುಮಾರ ದೊಡ್ಡಮನಿ ಅವರಿಗೆ ಸೂಚಿಸಿದರು.
ಊಟದಲ್ಲಿ ಏನಾದರೂ ವ್ಯತ್ಯಸವಾದರೆ ನನಗೆ ಪತ್ರ ಬರೆಯಿರಿ ಎಂದ ಶಾಸಕರು ಯಾವ ಕಾರಣಕ್ಕೂ ಆತಂಕ ಪಡದೇ ಉತ್ತಮ ಅಭ್ಯಾಸ ಮಾಡಲು ಸಲಹೆ ನೀಡಿದರು. ನಂತರ ಶಾಲಾ ಚಟುವಟಿಕೆ ಹಾಗೂ ಅವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಪ್ರತ್ಯೇಕವಾಗಿ ಆಪ್ತ ಸಮಾಲೋಚನೆ ನಡೆಸಿದರು.