ಕರಾವಳಿ-ಉತ್ತರ ಕರ್ನಾಟಕ ರೈಲಿಗೆ ರೆಡ್‌ ಸಿಗ್ನಲ್‌!

ಕರಾವಳಿ-ಉತ್ತರ ಕರ್ನಾಟಕ ರೈಲಿಗೆ ರೆಡ್‌ ಸಿಗ್ನಲ್‌!

ಮಂಗಳೂರು: ಮಂಗಳೂರಿನಿಂದ ಅರಸಿಕೆರೆ ಮಾರ್ಗ ವಾಗಿ ಮೀರಜ್‌ಗೆ 1990ರ ದಶಕದಲ್ಲಿ ಸಂಚರಿಸಿ ಬಳಿಕ ಸ್ಥಗಿತಗೊಂಡಿದ್ದ “ಮಹಾಲಕ್ಷ್ಮೀ ಎಕ್ಸ್‌ ಪ್ರಸ್‌’ ಇನ್ನೂ ಹಳಿಯೇರಿಲ್ಲ!

ಮಂಗಳೂರು-ಹಾಸನ ನಡುವೆ ಮೀಟರ್‌ಗೆಜ್‌ ರೈಲು ಮಾರ್ಗವಿದ್ದ ವೇಳೆ 1994ರ ವರೆಗೆ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ನಿಂದ ಪ್ರತೀ ರಾತ್ರಿ 11ಕ್ಕೆ ಮಂಗಳೂರಿನಿಂದ ಸಕಲೇಶಪುರ, ಅರಸಿಕೆರೆ, ಹುಬ್ಬಳ್ಳಿ ಧಾರವಾಡ, ಬೆಳಗಾವಿ ಮಾರ್ಗವಾಗಿ ಸಂಚರಿಸುತ್ತಿತ್ತು.

ಮೀರಜ್‌ ಪ್ರಯಾಣಕ್ಕೆ ಒಟ್ಟು 19 ತಾಸು ತಗಲುತ್ತಿತ್ತು.

ಮಂಗಳೂರು-ಬೆಂಗಳೂರು, ಮಂಗಳೂರು-ಮೈಸೂರು ಹಾಗೂ ಮಂಗಳೂರು-ಮೀರಜ್‌ ರೈಲು ಮೊದಲು ಓಡಾಟ ನಡೆಸುತ್ತಿತ್ತು. 1995ರಲ್ಲಿ ಮಂಗಳೂರು- ಬೆಂಗಳೂರು “ಮೀಟರ್‌ಗೆಜ್‌’ ಹಳಿ ಇದ್ದದ್ದನ್ನು ಹೊಸ ಮಾದರಿಯ “ಬ್ರಾಡ್‌ಗೆàಜ್‌’ಗೆ ಪರಿವರ್ತನೆ ಮಾಡಲಾಯಿತು. ಆಗ ಈ ಮೂರು ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಕಾಮಗಾರಿ ಯಾದ ಬಳಿಕ ಮಂಗಳೂರಿನಿಂದ ಬೆಂಗಳೂರು ಹಾಗೂ ಮೈಸೂರು ರೈಲು ಸಂಚಾರ ಆರಂಭವಾಯಿತೇ ವಿನಾ ಮೀರಜ್‌ಗೆ ತೆರಳುವ ರೈಲು ಆರಂಭವಾಗಿರಲಿಲ್ಲ.

ಮಹಾಲಕ್ಷ್ಮೀ ಎಕ್ಸ್‌ಪ್ರೆಸ್ಸನ್ನು ಮರು ಆರಂಭಿಸುವಂತೆ ಕರಾವಳಿ ಭಾಗದಲ್ಲಿ ಬಹುಬೇಡಿಕೆ ವ್ಯಕ್ತವಾಗಿತ್ತು. ಜತೆಗೆ ಹುಬ್ಬಳ್ಳಿ-ಧಾರವಾಡ ಭಾಗದಿಂದಲೂ ಆಗ್ರಹ ಕೇಳಿಬಂದಿತ್ತು. ಸಂಸದ ನಳಿನ್‌ ಕುಮಾರ್‌ ಕಟೀಲು ಸಹಿತ ವಿವಿಧ ಜನಪ್ರತಿನಿಧಿಗಳು ಕೂಡ ಈ ರೈಲು ಸೇವೆ ಮರು ಆರಂಭದ ಬಗ್ಗೆ ರೈಲ್ವೇ ಇಲಾಖೆಯಲ್ಲಿ ಪ್ರಯತ್ನ ಮಾಡಿದ್ದರೂ ಪ್ರಯೋಜನವಾಗಿಲ್ಲ.

ಯಾಕೆ ಅಗತ್ಯ?
ಮಂಗಳೂರು-ಮೀರಜ್‌ ರೈಲನ್ನು ನಡುವೆ ಆರಂಭಿಸುವುದರಿಂದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಸಾಂಗ್ಲಿ ಹಾಗೂ ಮೀರಜ್‌ ನಡುವೆ ಕರಾವಳಿ ಭಾಗದಿಂದ ನೇರ ರೈಲು ಸಂಪರ್ಕ ಸಾಧ್ಯವಾಗುತ್ತದೆ. ಜತೆಗೆ ಮಂಗಳೂರು-ಧಾರವಾಡ ನಡುವೆಯೂ ರೈಲ್ವೇ ಪ್ರಯಾಣ ಜಾಲ ಏರ್ಪಡುತ್ತದೆ. ಬಹು ಮುಖ್ಯವಾಗಿ ಸಾಂಗ್ಲಿ-ಮೀರಜ್‌ ನಡುವೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವರು ಸೇರಿದಂತೆ ಕನ್ನಡಿಗರು ಗಣನೀಯ ಸಂಖ್ಯೆಯಲ್ಲಿರುವುದರಿಂದ ಬಹು ವಿಧದಲ್ಲಿ ಇದು ಲಾಭವಾಗಲಿದೆ.

ಕರಾವಳಿಗೆ ಬಹು ಅನುಕೂಲ
“ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌’ ಮರು ಆರಂಭಗೊಂಡರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಬಹಳಷ್ಟು ಅನುಕೂಲವಿದೆ. ವಿಶೇಷವಾಗಿ ಕರಾವಳಿಯ ರೈಲ್ವೇ ಜಾಲ ಹುಬ್ಬಳಿ- ಧಾರವಾಡದ ಜತೆಗೆ ಸಂಪರ್ಕ ಸಾಧಿಸಲು ಅನುಕೂಲವಾಗುತ್ತದೆ. ಈಗಾಗಲೇ ವಾಣಿಜ್ಯ ನಗರವಾಗಿ ಗುರುತಿಸಿಕೊಂಡಿರುವ ಹುಬ್ಬಳ್ಳಿ- ಧಾರವಾಡ ನಗರಗಳ ಜತೆ ಹೆಚ್ಚಿನ ವಾಣಿಜ್ಯ ವ್ಯವಹಾರಕ್ಕೆ ಪೂರಕವಾಗಲಿದೆ. ಶಿಕ್ಷಣ, ಆರೋಗ್ಯ ಮುಂತಾದ ಕಾರಣಗಳಿಂದ ಆ ಭಾಗದಿಂದ ಗಣನೀಯ ಜನರು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು, ಉಡುಪಿ ಸಹಿತ ಧಾರ್ಮಿಕ ಕ್ಷೇತ್ರಗಳ ಭೇಟಿಗೆ ಅನುಕೂಲವಾಗಲಿದೆ.

ಮಂಗಳೂರಿನಿಂದ ಮೀರಜ್‌ಗೆ ಹುಬ್ಬಳ್ಳಿ-ಧಾರವಾಡ ಮಾರ್ಗವಾಗಿ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್ಸನ್ನು ಮರು ಆರಂಭಿಸಬೇಕು ಎಂಬ ಬೇಡಿಕೆಯನ್ನು ಈಗಾಗಲೇ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿಯು ನೀಡುತ್ತ ಬಂದಿದೆ. ಕರಾವಳಿ ಹಾಗೂ ಹುಬ್ಬಳ್ಳಿ-ಧಾರವಾಡ ಸಂಪರ್ಕ ವ್ಯವಸ್ಥೆಗೆ ಈ ರೈಲ್ವೇ ಸೇವೆಯಿಂದ ಬಹು ಲಾಭವಿದೆ. ಹೀಗಾಗಿ ರೈಲ್ವೇ ಇಲಾಖೆ ಇದರ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕಿದೆ.
– ಅನಿಲ್‌ ಹೆಗ್ಡೆ, ತಾಂತ್ರಿಕ ಸಲಹೆಗಾರರು, ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ

– ದಿನೇಶ್‌ ಇರಾ