'ಕಬ್ಜ' ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ಬರುತ್ತಿಲ್ಲ ರಾಜಮೌಳಿ! ಕಾರಣ?

'ಕಬ್ಜ' ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ಬರುತ್ತಿಲ್ಲ ರಾಜಮೌಳಿ! ಕಾರಣ?

ನ್ನಡದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'ದ ಹಾಡೊಂದು ಇಂದು (ಜನವರಿ 04) ಹೈದರಾಬಾದ್‌ನಲ್ಲಿ ಬಿಡುಗಡೆ ಆಗಲಿದೆ. ಹಾಡು ಬಿಡುಗಡೆ ಕಾರ್ಯಕ್ರಮವನ್ನು ಅದ್ದಧೂರಿಯಾಗಿ ಚಿತ್ರತಂಡ ಆಯೋಜಿಸಿದೆ.

ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಬರಲಿದ್ದರು.

ಆದರೆ ಹಠಾತ್ತನೆ ಕಾರ್ಯಕ್ರಮದ ಅತಿಥಿಗಳ ಪಟ್ಟಿಯಲ್ಲಿ ಬದಲಾವಣೆ ಆಗಿದೆ. ಕಾರ್ಯಕ್ರಮದ ಪ್ರಮುಖ ಅತಿಥಿಯಾಗಿದ್ದ ರಾಜಮೌಳಿ ಹಠಾತ್ತನೆ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ.

ರಾಜಮೌಳಿ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲವೆಂಬುದನ್ನು ಚಿತ್ರತಂಡ ಹೇಳಿದ್ದು, ಕಾರಣವನ್ನೂ ನೀಡಿದೆ.

ನಿನ್ನೆಯಷ್ಟೆ ತೆಲುಗು ಚಿತ್ರರಂಗದ ಹಿರಿಯ ನಿರ್ದೇಶಕ ಕೆ ವಿಶ್ವನಾಥ್ ವಿಧಿವಶರಾಗಿದ್ದು, ರಾಜಮೌಳಿ ಸಹ ವಿಶ್ವನಾಥ್ ಅವರ ಅಭಿಮಾನಿಯಾಗಿದ್ದವರು. ವಿಶ್ವನಾಥ್ ನಿಧನದ ಈ ದುಃಖದ ಸಮಯದಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲ ಎಂದು ಕಾರ್ಯಕ್ರಮಕ್ಕೆ ಗೈರಾಗುತ್ತಿದ್ದಾರೆ ರಾಜಮೌಳಿ.

ರಾಜಮೌಳಿ ಸೇರಿ ಅನೇಕರಿಗೆ ವಿಶ್ವನಾಥ್ ಅವರು ಸ್ಫೂರ್ತಿ ಆಗಿದ್ದರು. ವಿಶ್ವನಾಥ್ ಅವರನ್ನು ಕಳೆದುಕೊಂಡ ನೋವಿನಿಂದ ರಾಜಮೌಳಿ ಅವರು ಹೊರ ಬಂದಿಲ್ಲ. ಈ ಕಾರಣಕ್ಕೆ ಅವರು 'ಕಬ್ಜ' ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ, ಗಣ್ಯರ ಉಪಸ್ಥಿತಿಯಲ್ಲಿ ಕೆಲವು ಬದಲಾವಣೆ ಆಗಲಿದೆ ಎಂದು ತಂಡ ತಿಳಿಸಿದೆ. 'ಕಬ್ಜ' ಸಿನಿಮಾ ತಂಡ ಪ್ರಮೋಷನ್​ಗೆ ದೊಡ್ಡ ಮಟ್ಟದ ಪ್ಲ್ಯಾನ್ ರೂಪಿಸಿಕೊಂಡಿದೆ. ಈ ಕಾರಣಕ್ಕೆ ತಂಡ ಮತ್ತೆ ಹೈದರಾಬಾದ್​ಗೆ ತೆರಳಲಿದೆ. ಮುಂದಿನ ದಿನಗಳಲ್ಲಿ 'ಕಬ್ಜ' ಚಿತ್ರದ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ. ಇದು ಪೂರ್ವ ನಿರ್ಧರಿತ ಕಾರ್ಯಕ್ರಮ ಆಗಿರುವುದರಿಂದ ಖ್ಯಾತ ನಿರ್ದೇಶಕ ಕೆ. ವಿಶ್ವನಾಥ್ ಅವರಿಗೆ ಮೌನಾಚರಣೆ ಕೋರಿ 'ಕಬ್ಜ' ಸಾಂಗ್ ರಿಲೀಸ್ ಮಾಡಲಾಗುತ್ತಿದೆ.

'ಕಬ್ಜ' ಸಿನಿಮಾದ ಮುಂದಿನ ದಿನದ ಕಾರ್ಯಕ್ರಮಗಳಲ್ಲಿ ತಾವು ಭಾಗವಹಿಸುವುದಾಗಿ ರಾಜಮೌಳಿ ಭರವಸೆ ನೀಡಿದ್ದಾರಂತೆ.

'ಕಬ್ಜ' ಸಿನಿಮಾವು ಮಾರ್ಚ್ 17 ರಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ಆರ್ ಚಂದ್ರು ನಿರ್ದೇಶನ ಮಾಡಿದ್ದು, ಉಪೇಂದ್ರ ಜೊತೆಗೆ ನಟ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಶ್ರಿಯಾ ಶಿರಿನ್ ನಾಯಕಿಯಾಗಿ ನಟಿಸಿದ್ದು, ಪ್ಯಾನ್ ಇಂಡಿಯಾ ಮಾತ್ರವೇ ಅಲ್ಲದೆ ಚೀನಾ ಭಾಷೆಯಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದೆ.