ಎಲ್ಲರಿಂದಲೂ ಸಮ್ಮತಿ ಸಿಕ್ಕಿದರೆ ಮಾತ್ರ ಹಾಸನ ಕ್ಷೇತ್ರದಲ್ಲಿ ಸ್ಪರ್ಧೆ: ರಾಜೇಗೌಡ

ಎಲ್ಲರಿಂದಲೂ ಸಮ್ಮತಿ ಸಿಕ್ಕಿದರೆ ಮಾತ್ರ ಹಾಸನ ಕ್ಷೇತ್ರದಲ್ಲಿ ಸ್ಪರ್ಧೆ: ರಾಜೇಗೌಡ

ಹಾಸನ: ನಾನು ಯಾರ ಪರವಾದ ಅಭ್ಯರ್ಥಿಯಲ್ಲ. ಜೆಡಿಎಸ್‌ನಲ್ಲಿ ಎಲ್ಲರಿಂದಲೂ ಸಮ್ಮತಿ ಸಿಕ್ಕಿದರೆ ಮಾತ್ರ ಸ್ಪರ್ಧೆಗಿಳಿಯುವೆ ಎಂದು ಪಕ್ಷದ ಹಿರಿಯ ಮುಖಂಡ ಕೆ.ಎಂ.ರಾಜೇಗೌಡ ( ಕೆಎಂಆರ್‌) ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಾಕಾಂಕ್ಷಿಗಳಲ್ಲಿ ನನ್ನ ಹೆಸರು ಪ್ರಸ್ತಾಪವಾದ ನಂತರ ನನ್ನ ಬಗ್ಗೆ ವಿಭಿನ್ನ ಹೇಳಿಕೆಗಳು ಕೇಳಿ ಬರುತ್ತಿವೆ.

ನಾನು ಯಾರ ಪರ, ವಿರುದ್ಧವೂ ಇಲ್ಲ. ಯಾರ ಬಿಂಬಿತ ಅಭ್ಯರ್ಥಿಯೂ ಅಲ್ಲ. ರೇವಣ್ಣ ಅವರೇ ಅಭ್ಯರ್ಥಿ ಎಂಬ ಮಾತುಗಳು ಈಗ ಕೇಳಿಬರುತ್ತಿವೆ. ಆದರೆ ನಾನು ಸರ್ವಸಮ್ಮತ ಅಭ್ಯರ್ಥಿಯಾದರೆ, ಪಕ್ಷದ ಎಲ್ಲ ಮುಖಂಡರೂ ಸಂಘಟಿತರಾಗಿ ಚುನಾವಣೆಯಲ್ಲಿ ಬೆಂಬಲ ನೀಡಿ ಹೋರಾಟ ಮಾಡುವ ನಿಖರ ಭರವಸೆ ನೀಡಿದರೆ ಮಾತ್ರ ಸ್ಪರ್ಧಿಸುತ್ತೇನೆ. ಪಕ್ಷದಲ್ಲಿ ಒಮ್ಮತ ಮೂಡಿ ಸ್ಪರ್ಧೆಗಿಳಿಯಿರಿ ಎಂದರೆ ಸ್ಪರ್ಧಿಸುವೆ. ಇಲ್ಲವೇ ಪಕ್ಷದ ಮುಖಂಡರು ಸೂಚಿಸುವ ಅಭ್ಯರ್ಥಿ ಪರ ಪ್ರಚಾರ ಮಾಡುವೆ ಎಂದರು.

ಚುನಾವಣೆಯಲ್ಲಿ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿ ಘೋಷಣೆ ಆಗುವವರೆಗೂ ನಾನು ಪ್ರಚಾರ ಮಾಡಲು ಹೋಗುವುದಿಲ್ಲ. ನಮ್ಮ ಪಕ್ಷದಲ್ಲಿ ಒಗ್ಗಟ್ಟಿರಬೇಕು. ಒಟ್ಟಾಗಿ ಹೋಗಬೇಕು ಎಂಬುದು ನನ್ನ ಅಪೇಕ್ಷೆ ಎಂದರು.