ಉತ್ತರಪ್ರದೇಶ: ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಇಬ್ಬರು ಮೃತ್ಯು

ಕಾನ್ಪುರ: ಉತ್ತರಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯ ಗ್ರಾಮವೊಂದರಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ 45 ವರ್ಷ ವಯಸ್ಸಿನ ಮಹಿಳೆ ಹಾಗೂ ಆಕೆಯ 20 ವರ್ಷ ವಯಸ್ಸಿನ ಪುತ್ರಿ ಸಜೀವ ದಹನವಾಗಿದ್ದಾರೆ.
ಜಿಲ್ಲೆಯ ಮದೂಲಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸಮಾಜ ಅಥವಾ ಸರ್ಕಾರಿ ಭೂಮಿಯ ಒತ್ತುವರಿ ತೆರವಿಗಾಗಿ ಪೊಲೀಸರು ಹಾಗೂ ಜಿಲ್ಲಾ ಕಂದಾಯ ಇಲಾಖೆ ಅಧಿಕಾರಿಗಳು ತೆರಳಿದ್ದರು. ಅಧಿಕಾರಿಗಳು ಯಾವುದೇ ನೋಟಿಸ್ ನೀಡದೇ ಬೆಳಿಗ್ಗೆ ಬುಲ್ಡೋಜರ್‌ನೊಂದಿಗೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
"ನಾವು ಮನೆಯೊಳಗೆ ಇದ್ದಾಗಲೇ ಸಿಬ್ಬಂದಿ ಗುಡಿಸಲಿಗೆ ಬೆಂಕಿ ಹಚ್ಚಿದರು. ನಾವು ಹೇಗೋ ತಪ್ಪಿಸಿಕೊಂಡೆವು. ನಮ್ಮ ದೇವಸ್ಥಾನಗಳನ್ನು ಹಾಳುಗೆಡವಿದರು. ಜಿಲ್ಲಾಧಿಕಾರಿ ಸೇರಿದಂತೆ ಯಾರೂ ಏನೂ ಮಾಡಲಿಲ್ಲ. ಎಲ್ಲರೂ ಓಡಿಹೋದರು. ಯಾರೂ ನನ್ನ ತಾಯಿಯನ್ನು ರಕ್ಷಿಸಲಿಲ್ಲ" ಎಂದು ಶಿವಂದೀಕ್ಷಿತ್ ವಿವರಿಸಿದರು.
ಆದರೆ ಪ್ರಮೀಳಾ ದೀಕ್ಷಿತ್ ಹಾಗೂ ನೇಹಾ ದೀಕ್ಷಿತ್ ತಾವೇ ಬೆಂಕಿ ಹಚ್ಚಿಕೊಂಡರು ಎಂದು ಪೊಲೀಸರು ಹೇಳಿದ್ದರೆ. ಗಾಯಾಳುಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ರೂರಾ ಠಾಣಾಧಿಕಾರಿ ದಿನೇಶ್ ಗೌತಮ್ ಹಾಗೂ ಪ್ರಮೀಳಾ ಅವರ ಪತಿ ಗೆಂಡನ್‌ಲಾಲ್ ಅವರಿಗೆ ಸುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.