ಇಂದು ದೆಹಲಿಯಲ್ಲಿ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ : `ಕೈ' ಅಭ್ಯರ್ಥಿಗಳ 2 ನೇ ಪಟ್ಟಿ ಬಿಡುಗಡೆ ಸಾಧ್ಯತೆ
ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ 124 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಇಂದು ಕಾಂಗ್ರೆಸ್ ಕೇಂದ್ರ ಚುನಾವಣೆ ಸಮಿತಿ ಸಭೆ ನಡೆಯಲಿದ್ದು, ಸಭೆಯ ಬಳಿಕ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ವರಿಷ್ಠ ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಡಾ.ಜಿ.ಪರಮೇಶ್ವರ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
ಕಾಂಗ್ರೆಸ್ ನ ಎರಡನೇ ಪಟ್ಟಿಯಲ್ಲಿ 52 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಗೊಳಿಸಿ ಹೈಕಮಾಂಡ್ಗೆ ಕಳುಹಿಸಿದ್ದು, 2ನೇ ಪಟ್ಟಿಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯನವರಿಗೆ ವರುಣಾದಿಂದ ಸ್ಪರ್ಧಿಸಲು ಟಿಕೆಟ್ ಘೋಷಣೆಯಾಗಿದ್ದು, 2ನೇ ಪಟ್ಟಿಯಲ್ಲಿ ಅವರಿಗೆ ಕೋಲಾರದಿಂದ ಟಿಕೆಟ್ ನೀಡಲು ಹೈಕಮಾಂಡ್ ಒಪ್ಪಿಗೆ ನೀಡಲಿದೆ ಎನ್ನಲಾಗಿದ್ದು, 2ನೇ ಪಟ್ಟಿಯನ್ನು ಹೈಕಮಾಂಡ್ ಫೈನಲ್ ಮಾಡಲಿದ್ದು, ಏಪ್ರಿಲ್ 4 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಉನ್ನತ ಮಟ್ಟದ ನಾಯಕರ ಸಭೆ ನಡೆಯಲಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಮೇ. 10 ರಂದು ಮತದಾನ ನಡೆಯಲಿದ್ದು, ಮೇ. 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಕಾಂಗ್ರೆಸ್ 124 ಕ್ಷೇತ್ರಗಳಿಗೆ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ.