ಇಂದಿನಿಂದ 3 ದಿನ ಅಮಿತ್ ಶಾ ರಾಜ್ಯ ಪ್ರವಾಸ, ಎಲ್ಲಿಗೆ ಭೇಟಿ, ಏನೇನು ಚರ್ಚೆ?

ಬೆಂಗಳೂರು: ಇಂದು ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದು, ಮೂರು ದಿನ ರಾಜ್ಯದಲ್ಲಿ ಓಡಾಡಲಿದ್ದಾರೆ. ರಾಜ್ಯ ಬಿಜೆಪಿ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಮುಂದಿನ ಚುನಾವಣೆಗೆ ಸಂಬಂಧಿಸಿ ಉತ್ತೇಜನ ನೀಡಲು ಆಗಮಿಸುತ್ತಿದ್ದಾರೆ.
ಗುಜರಾತ್ ಚುನಾವಣೆ ಬಳಿಕ ಕರ್ನಾಟಕ ಮುಂದಿನ ಟಾರ್ಗೆಟ್ ಆಗಿದ್ದು, ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೊಳಿಸಲು ಪ್ಲಾನ್ ಹಾಕಿಕೊಳ್ಳಲಾಗಿದೆ. ವಿಜಯಿ ಸ್ಥಾನಗಳ ಸಂಖ್ಯೆ 150 ತಲುಪಬೇಕಿದ್ದರೆ ಹಳೆ ಮೈಸೂರು ಭಾಗದಲ್ಲಿ 30 ಸ್ಥಾನ ಗೆಲ್ಲಬೇಕಿದೆ. ಇಲ್ಲಿ ಬಲವಾಗಿರುವ ಜೆಡಿಎಸ್ಸನ್ನು ಮಣಿಸಲು, ಜೆಡಿಎಸ್ನ ಪಂಚರತ್ನ ಯಾತ್ರೆಗೆ ತಿರುಗೇಟು ಕೊಡಲು ಶಾ ತಂತ್ರ ಹೆಣೆಯುತ್ತಿದ್ದಾರೆ.
ಕಳೆದ ಬಾರಿ ಹಲವಾರು ಸಲ ಶಾ ಇಲ್ಲಿ ಭೇಟಿ ನೀಡಿದ್ದರು. ಬಿಜೆಪಿ 104 ಸ್ಥಾನ ಗೆದ್ದಿತ್ತು. ಯಡಿಯೂರಪ್ಪ ಸಿಎಂ ಎಂದು ಘೋಷಣೆ ಮಾಡಿದಾಗಲೂ ಕಾಂಗ್ರೆಸ್ 104 ಸ್ಥಾನ ಗೆದ್ದಿತ್ತು. ಹೀಗಾಗಿ ಈ ಬಾರಿ ಐದು ತಿಂಗಳ ಮೊದಲೇ ರಾಜ್ಯಕ್ಕೆ ಎಂಟ್ರಿ ಕೊಟ್ಟಿರುವ ಶಾ ಮೊದಲ ಭೇಟಿಯಲ್ಲಿ ಪಕ್ಷದ ನಾಯಕರ ಜತೆ ಚರ್ಚೆ ನಡೆಸಿ ಇತರ ಪಕ್ಷಗಳಿಂದ ಬರಲು ಆಸಕ್ತಿ ಇರುವವರ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಜನಾರ್ದನ ರೆಡ್ಡಿ ನೂತನ ಪಕ್ಷದಿಂದ ಆಗುವ ಸಾಧಕ ಬಾಧಕಗಳ ಬಗ್ಗೆ, ಚುನಾವಣಾ ತಂತ್ರಗಾರಿಕೆ ಬಗ್ಗೆ, ಪಕ್ಷ ಮತ್ತು ಸಂಘಟನೆಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಯಲಿದೆ. ನಾಯಕರ ಜತೆ ಜಿಲ್ಲಾವಾರು ಮಾಹಿತಿ ಪಡೆಯಲಿದ್ದಾರೆ.