ಆರ್‌ಸಿಬಿ ಸತತ 2 ಪಂದ್ಯ ಗೆದ್ದ ನಂತರ ಅಂಕಪಟ್ಟಿ; ಪ್ಲೇಆಫ್ ಅವಕಾಶ ಹೇಗಿದೆ?

ಆರ್‌ಸಿಬಿ ಸತತ 2 ಪಂದ್ಯ ಗೆದ್ದ ನಂತರ ಅಂಕಪಟ್ಟಿ; ಪ್ಲೇಆಫ್ ಅವಕಾಶ ಹೇಗಿದೆ?

ನಿವಾರ, ಮಾರ್ಚ್ 18ರಂದು ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮಹಿಳಾ ತಂಡದ ವಿರುದ್ಧ ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದು, ಪ್ಲೇಆಫ್ ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಆರಂಭಿಕ ಬ್ಯಾಟರ್ ಸೋಫಿ ಡಿವೈನ್ ಅವರ 36 ಎಸೆತಗಳಲ್ಲಿ 99 ರನ್‌ಗಳ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ತಂಡವು ಗುಜರಾತ್ ಜೈಂಟ್ಸ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತು. ಇದು ಆರ್‌ಸಿಬಿ ಆಡಿದ 7 ಪಂದ್ಯಗಳಲ್ಲಿ ತನ್ನ ಎರಡನೇ ಗೆಲುವು ದಾಖಲಿಸಿತು.

ಇನ್ನು ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಯುಪಿ ವಾರಿಯರ್ಸ್ ವಿರುದ್ಧ 5 ವಿಕೆಟ್‌ಗಳಿಂದ ಸೋತಿದ್ದು, ಆರ್‌ಸಿಬಿ ತಂಡದ ಪ್ಲೇಆಫ್ ಹಂತ ತಲುಪುವ ಆಸೆ ಮತ್ತಷ್ಟು ಜಟಿಲವಾಗುವಂತೆ ಮಾಡಿದೆ.

ಮುಂಬೈ ಇಂಡಿಯನ್ಸ್ 10 ಅಂಕಗಳಿಂದ ಮೊದಲ ಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 8 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಯುಪಿ ವಾರಿಯರ್ಸ್ 6 ಅಂಕಗಳನ್ನು ಗಳಿಸಿ 3ನೇ ಸ್ಥಾನದಲ್ಲಿದೆ. ಆದರೂ, ಆರ್‌ಸಿಬಿ ತಂಡ ಅಗ್ರ ಮೂರರಲ್ಲಿ ಸ್ಥಾನ ಪಡೆದು ಪ್ಲೇಆಫ್ ತಲುಪಬೇಕಾದರೆ, ಬೇರೆ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.

ಆರ್‌ಸಿಬಿ ತಂಡದ ಪ್ಲೇಆಫ್ ಅರ್ಹತೆ ಅವಕಾಶ ಹೇಗಿದೆ?

1. ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಆರ್‌ಸಿಬಿ ಸೋಲಿಸಬೇಕು

2. ಗುಜರಾತ್ ಜೈಂಟ್ಸ್ ತಂಡ ಯುಪಿ ವಾರಿಯರ್ಜ್ ತಂಡವನ್ನು ಸೋಲಿಸಬೇಕು

3. ಡೆಲ್ಲಿ ಕ್ಯಾಪಿಟಲ್ಸ್ ತಂಡ ಯುಪಿ ವಾರಿಯರ್ಜ್ ತಂಡವನ್ನು ಸೋಲಿಸಬೇಕು

WPL 2023: ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದ ಗುಜರಾತ್ ಜೈಂಟ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಸೋಲಿನ ನಂತರ ಗುಜರಾತ್ ಜೈಂಟ್ಸ್ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಅಲ್ಲದೇ, 2023ರ ಮಹಿಳಾ ಪ್ರೀಮಿಯರ್ ಲೀಗ್‌ನ ಅಂಕಪಟ್ಟಿಯಲ್ಲಿ 4ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದಿದೆ. ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.

PL 2023: ನವೀಕರಿಸಿದ ಅಂಕಪಟ್ಟಿ (ಶನಿವಾರದ ಅಂತ್ಯಕ್ಕೆ)

ಮುಂಬೈ ಇಂಡಿಯನ್ಸ್ - 6 ಪಂದ್ಯ, 5 ಗೆಲುವು, 1 ಸೋಲು - 10 ಅಂಕಗಳು

ಡೆಲ್ಲಿ ಕ್ಯಾಪಿಟಲ್ಸ್ - 6 ಪಂದ್ಯ, 4 ಗೆಲುವು, 2 ಸೋಲು - 8 ಅಂಕಗಳು

ಯುಪಿ ವಾರಿಯರ್ಸ್ - 6 ಪಂದ್ಯ, 3 ಗೆಲುವು, 3 ಸೋಲು - 6 ಅಂಕಗಳು

ರಾಯಲ್ ಚಾಲೆಂಜರ್ಸ್ ಬೆಂಗಳೂರು - 7 ಪಂದ್ಯ, 2 ಗೆಲುವು, 5 ಸೋಲು - 4 ಅಂಕಗಳು

ಗುಜರಾತ್ ಜೈಂಟ್ಸ್ - 7 ಪಂದ್ಯ, 2 ಗೆಲುವು, 5 ಸೋಲು - 4 ಅಂಕಗಳು

2023ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಭಾನುವಾರವು ವಿಶ್ರಾಂತಿ ದಿನವಾಗಿದ್ದು, ಸೋಮವಾರ ಮಾರ್ಚ್ 20ರಂದು ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ಕಾದಾಟ ನಡೆಯಲಿದೆ. ಅದೇ ದಿನದ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಡಲಿವೆ.

ಗುಜರಾತ್ ಜೈಂಟ್ಸ್ ವಿರುದ್ಧ ಆರ್‌ಸಿಬಿಗೆ ಗೆಲುವು

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ನಿಗದಿತ 20 ಓವರ್‌ಗಳಲ್ಲಿ 188 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರು. ಗುಜರಾತ್ ಜೈಂಟ್ಸ್ ಪರ ಲಾರಾ ವೊಲ್ವಾರ್ಡ್ 42 ಎಸೆತಗಳಲ್ಲಿ 68 ರನ್‌ಗಳನ್ನು ಬಾರಿಸಿದರೆ, ಮೂರನೇ ಕ್ರಮಾಂಕದ ಬ್ಯಾಟರ್ ಸಬ್ಬಿನೇನಿ ಮೇಘನಾ 32 ಎಸೆತಗಳಲ್ಲಿ 31 ರನ್ ಗಳಿಸಿದರು.

189 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ ಅತ್ಯುತ್ತಮ ಆರಂಭವನ್ನು ಪಡೆಯಿತು. ನಾಯಕಿ ಸ್ಮೃತಿ ಮಂಧಾನ ಮತ್ತು ಸೋಫಿ ಡಿವೈನ್ ಕೇವಲ 9.2 ಓವರ್‌ಗಳಲ್ಲಿ 125 ರನ್‌ಗಳ ಆರಂಭಿಕ ಜೊತೆಯಾಟವನ್ನು ನೀಡಿದರು. ಸ್ಮೃತಿ ಮಂಧಾನ 37 ರನ್‌ ಗಳಿಸಿದ್ದಾಗ ವಿಕೆಟ್ ಕಳೆದುಕೊಂಡರು.

ಕಿಮ್ ಗಾರ್ತ್ ಅವರ ಬೌಲಿಂಗ್‌ನಲ್ಲಿ ಅಶ್ವನಿ ಕುಮಾರಿಗೆ ಕ್ಯಾಚ್ ನೀಡುವ ಮುನ್ನ ಸೋಫಿ ಡಿವೈನ್ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಮೊದಲ ಶತಕಕ್ಕೆ ಕೇವಲ ಒಂದು ರನ್ ಕೊರತೆ ಅನುಭವಿಸಿದರು. ನಂತರ ಎಲ್ಲಿಸ್ ಪೆರ್ರಿ ಮತ್ತು ಹೀದರ್ ನೈಟ್ ಮುರಿಯದ 42 ರನ್‌ಗಳ ಜೊತೆಯಾಟದಿಂದ ಆರ್‌ಸಿಬಿ ತಂಡ ಗೆಲುವು ಕಂಡಿತು.