ತುಮಕೂರು ರಸ್ತೆಯಲ್ಲಿ ಮೆಟ್ರೋ ಫ್ಲೈಓವರ್ ಹತ್ತಿ ಜನರ ಪ್ರತಿಭಟನೆ

ಬೆಂಗಳೂರು: ನಾಗಸಂದ್ರದಿಂದ ಕೇವಲ 1 ಕಿಮೀ ದೂರದಲ್ಲಿರುವ ಸ್ಥಳದಲ್ಲಿ ಮೆಟ್ರೋ ನಿಲ್ದಾಣ ನಿರ್ಮಿಸುವ ನಿರ್ಧಾರದ ಹಿಂದೆ ಭ್ರಷ್ಟಾಚಾರ ಇದೆ ಎಂದು ಆರೋಪಿಸಿರುವ ಜನರು, ಅಂಚೆಪಾಳ್ಯದಲ್ಲಿ ನಿಲ್ದಾಣ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ತುಮಕೂರು ರಸ್ತೆಯ ಶ್ರೀಕಂಠಪುರ ಅಂಚೆಪಾಳ್ಯದಲ್ಲಿ ಮೆಟ್ರೋ ರೈಲು ನಿಲ್ದಾಣ ನಿರ್ಮಿಸಬೇಕೆಂದು ಆಗ್ರಹಿಸಿ ಶ್ರೀಕಂಠಪುರ ಮೆಟ್ರೋ ರೈಲು ಹೋರಾಟ ಸಮಿತಿ ನೇತೃತ್ವದಲ್ಲಿ ಸ್ಥಳೀಯ ನಾಗರಿಕರು ಶನಿವಾರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಮೆಟ್ರೋ ಫ್ಲೈ ಓವರ್ ಏರಿ ಹಳಿ ಮೇಲೆ ಕಪ್ಪು ಪಟ್ಟಿ ಧರಿಸಿ ವಿನೂತನ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಮೆಟ್ರೋ ಫ್ಲೈ ಓವರ್ ಕೆಳಗಡೆ ಪ್ರತಿಭಟನೆಗೆ ಮಾದನಾಯಕನ ಹಳ್ಳಿ ಪೊಲೀಸರು ಅನುಮತಿ ನೀಡಿದ್ದರು. ಆದರೆ ಪ್ರತಿಭಟನೆಗೆ ನೂರಾರು ಜನ ಜಮಾವಣೆಗೊಂಡ ಸಂದರ್ಭದಲ್ಲಿ ಬೆಂಗಳೂರು- ತುಮಕೂರು ಹೆದ್ದಾರಿಯಲ್ಲಿ ಒಂದೆರಡು ಗಂಟೆ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಸಮಯದಲ್ಲಿ ಕೆಲ ಯುವಕರು ಪೊಲೀಸರ ಕಣ್ತಪ್ಪಿಸಿ ಪಿಲ್ಲರ್ ಮೂಲಕ ಫ್ಲೈ ಓವರ್ ಏರಿ ಅಲ್ಲಿ ಪ್ರತಿಭಟನೆಗೆ ಮುಂದಾದರು.