ಚಾಮರಾಜನಗರದಲ್ಲಿ ಬೃಹತ್ ಆಸ್ಪತ್ರೆ ಲೋಕಾರ್ಪಣೆ ಮಾಡಿದ ರಾಷ್ಟ್ರಪತಿ

ಚಾಮರಾಜನಗರ: ನಗರದ ಹೊರವಲಯದ ಯಡಬೆಟ್ಟದಲ್ಲಿ ಬಳಿ ನಿರ್ಮಿಸಿರುವ 450 ಹಾಸಿಗೆಯ ಸರ್ಕಾರಿ ಆಸ್ಪತ್ರೆಯನ್ನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಉದ್ಘಾಟಿಸಿದರು.
ಇದಕ್ಕೂ ಮುನ್ನ ರಾಷ್ಟ್ರಪತಿಗಳು ಬಿಳಿಗಿರಿರಂಗನಬೆಟ್ಟದ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ರಾಷ್ಟ್ರಪತಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಜರಿದ್ದರು.
ಆಸ್ಪತ್ರೆ ಹೇಗಿದೆ?: ಭಾರತೀಯ ವೈದ್ಯಕೀಯ ಮಂಡಳಿಯ ಮಾರ್ಗಸೂಚಿಗಳ ಅನ್ವಯ ರಾಜ್ಯ ಸರ್ಕಾರವು 2018-19ನೇ ಸಾಲಿನಲ್ಲಿ 450 ಹಾಸಿಗೆಗಳ ಹೊಸ ಆಸ್ಪತ್ರೆಯನ್ನು ನಿರ್ಮಿಸಲು ಅನುಮೋದನೆ ನೀಡಿತ್ತು. 450 ಹಾಸಿಗೆಗಳ ಬಹುಮಹಡಿ (ನಾಲ್ಕು ಅಂತಸ್ತು) ಬೋಧನಾ ಆಸ್ಪತ್ರೆ 30,728 ಚ.ಮಿ. ವಿಸ್ತೀರ್ಣ ಹೊಂದಿದ್ದು, ಇದನ್ನು 166.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಈ ಹೊಸ ಬೋಧನಾ ಆಸ್ಪತ್ರೆಯಲ್ಲಿ 9 ಆಧುನಿಕ ಆಪರೇಷನ್ ಥಿಯೇಟರ್‌ಗಳು, ಸುಸಜ್ಜಿತ 50 ಹಾಸಿಗೆ ಐಸಿಯು ವಾರ್ಡ್‌ಗಳು, 20 ಕೆ.ಎಲ್ ದ್ರವ ಆಮ್ಲಜನಕ ಸಂಗ್ರಹ ಟ್ಯಾಂಕ್, 2,000 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಜನರೇಟರ್‌ಗಳು, ಕೇಂದ್ರಿತ ವೈದ್ಯಕೀಯ ಗ್ಯಾಸ್ ಪೈಪ್‌ಲೈನ್ ವ್ಯವಸ್ಥೆ, ಹೊರರೋಗಿಗಳು (ಒಪಿಡಿ) ಮತ್ತು ಒಳರೋಗಿಗಳು (ಐಪಿಡಿ) ವಿಭಾಗಗಳಲ್ಲದೆ 30 ಹಾಸಿಗೆಗಳ ತುರ್ತು ವಿಭಾಗ ಕೂಡ ಇವೆ.
ಎಲ್ಲಿ ಯಾವ ಸೇವೆ ಲಭ್ಯ?: ನೆಲ ಮಹಡಿಯಲ್ಲಿ ಸಾಮಾನ್ಯ ಔಷಧ, ಚರ್ಮ, ಮನೋವೈದ್ಯಶಾಸ್ತ್ರ, ಕ್ಷಯರೋಗ ಮತ್ತು ಎದೆ, ದಂತ ವೈದ್ಯಶಾಸ್ತ್ರ, ಸಾಮಾನ್ಯ ಶಸ್ತ್ರಚಿಕಿತ್ಸೆ, ಮೂಳೆ, ರೇಡಿಯಾಲಜಿ, ಇಎನ್‌ಟಿ, ನೇತ್ರ ಚಿಕಿತ್ಸೆ ಮತ್ತು ತುರ್ತು ಚಿಕಿತ್ಸೆ ವಲಯಗಳು ಇರಲಿವೆ. ಮೊದಲ ಮಹಡಿಯಲ್ಲಿ ವಿಶೇಷ ಅರೆ ವಿಶೇಷ ಮತ್ತು ಸಾಮಾನ್ಯ ವಾರ್ಡ್‌ಗಳು, ರಕ್ತಕೇಂದ್ರ, ಮುಖ್ಯಸ್ಥರ ಕೊಠಡಿ, ಆಸ್ಪತ್ರೆ ಕಚೇರಿ ಮತ್ತು ಕೇಂದ್ರ ಔಷಧಾಲಯಗಳಿವೆ.
ಎರಡನೇ ಮಹಡಿಯಲ್ಲಿ ಸಮಾಲೋಚನೆ ಕೊಠಡಿ, ಔಷಧಾಲಯ, ಸಾಮಾನ್ಯವಾರ್ಡ್, ವಿಶೇಷ ವಾರ್ಡ್, ಹಿರಿಯ ಮತ್ತು ಕಿರಿಯ ವೈದ್ಯರ ವಿಶ್ರಾಂತಿ ಕೊಠಡಿಗಳು ಇವೆ. ಮೂರನೇ ಮಹಡಿಯು ಉಪನ್ಯಾಸ ಸಭಾಂಗಣ, ಗ್ರಂಥಾಲಯ, ರೋಗಾಣು ಮುಕ್ತ ಸಂಗ್ರಹ ಕೊಠಡಿ, ಅಭ್ಯಾಸ ಕೊಠಡಿ, ಔಷಧಾಲಯ, ವಸ್ತ್ರಗಳ ಕೊಠಡಿ, ಸಾಮಾನ್ಯವಾರ್ಡ್, ಅರೆ ವಿಶೇಷ ವಾರ್ಡ್, ವಿಶೇಷ ವಾರ್ಡ್, ವೈದ್ಯರ ವಿಶ್ರಾಂತಿ ಕೊಠಡಿಗಳು ಇವೆ.
ನಾಲ್ಕನೇ ಮಹಡಿಯಲ್ಲಿ ಐಸಿಯು, ವಿಐಪಿ ವಾರ್ಡ್, ಸಿದ್ಧತಾ ಕೊಠಡಿ, ಪೂರ್ವ-ಆಪರೇಟಿವ್ ರೂಂ, ಉಪನ್ಯಾಸ ಕೊಠಡಿ, ಡೆಮೊಕೊಠಡಿ, ಕೇಂದ್ರಿತ ಸಂಗ್ರಹಕೊಠಡಿ, ಸರ್ವರ್ ರೂಂ, ವೈದ್ಯರು ಮತ್ತು ನರ್ಸ್ ವಿಶ್ರಾಂತಿ ಕೊಠಡಿಗಳಿವೆ.
ಸಮೀಪದಲ್ಲೇ ಇದೆ ಮೆಡಿಕಲ್ ಕಾಲೇಜು: ನೂತನ ಆಸ್ಪತ್ರೆ ಸಮೀದಲ್ಲೇ ಮೆಡಿಕಲ್ ಕಾಲೇಜು ಇದ್ದು, ಇಲ್ಲಿ 750 ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು, 100 ಬಿಎಸ್ಸಿ (ನಸಿರ್ಂಗ್), 60 ಬಿಎಸ್ಸಿ (ವೃತ್ತಿಪರ ವಿಜ್ಞಾನಗಳ ಆರೋಗ್ಯ) ವಿದ್ಯಾರ್ಥಿಗಳು ಜತೆ 200 ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
2021-22 ರಿಂದ 12 ವಿಭಾಗಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲು ಸಂಸ್ಥೆ ಅರ್ಜಿ ಸಲ್ಲಿಸಿದೆ. 200ಕ್ಕೂ ಹೆಚ್ಚು ವೈದ್ಯರು, 250 ಸುಶಿಕ್ಷಿತ ದಾದಿಯರು ಮತ್ತು 300 ಬೋಧಕೇತರ ಸಿಬ್ಬಂದಿಯ ಸಮರ್ಪಿತ ಬೋಧನಾ ವಿಭಾಗದೊಂದಿಗೆ, 2020-21ನೇ ಸಾಲಿನ ಆಯಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಮೆಡಿಕಲ್ ಕಾಲೇಜು ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿರುವುದು ಹೆಗ್ಗಳಿಕೆ ವಿಚಾರ.