IPL - WPL| ಸ್ಥಳೀಯ ಪ್ರತಿಭೆಗಳನ್ನು ಗೌರವಿಸಬೇಕು: ವೆಂಕಟೇಶ್ ಪ್ರಸಾದ್

IPL - WPL| ಸ್ಥಳೀಯ ಪ್ರತಿಭೆಗಳನ್ನು ಗೌರವಿಸಬೇಕು: ವೆಂಕಟೇಶ್ ಪ್ರಸಾದ್

ಬೆಂಗಳೂರು: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಇಂಡಿಯನ್ ಪ್ರೀಮಿಯರ್ ಲೀಗ ಮತ್ತು ಮಹಿಳಾ ಪ್ರೀಮಿಯರ್ ಲೀಗ್‌ಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ಕೊಟ್ಟಿಲ್ಲ. ಸ್ಥಳೀಯ ಪ್ರತಿಭಾನ್ವಿತರನ್ನು ಗೌರವಿಸಬೇಕು ಎಂದು ಕ್ರಿಕೆಟ್ ವೀಕ್ಷಕ ವಿವರಣೆಗಾರ ವೆಂಕಟೇಶ್ ಪ್ರಸಾದ್ ಹೇಳಿದರು.

ಮುಂಬೈನಲ್ಲಿ ನಡೆಯುತ್ತಿರುವ ಪ್ರಥಮ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟೂರ್ನಿಯಲ್ಲಿ ಆರ್‌ಸಿಬಿ ಮಹಿಳಾ ತಂಡವು ಮೊದಲ ಐದು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿತ್ತು. ಆರನೇಯದ್ದರಲ್ಲಿ ಗೆದ್ದಿತು. ತಂಡದ ನಾಯಕ ಸ್ಮೃತಿ ಮಂದಾನ ಅವರು ಬ್ಯಾಟಿಂಗ್ ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಕುರಿತು ಕನ್ನಡಿಗ ವೆಂಕಟೇಶ್ ಪ್ರಸಾದ್ ಶುಕ್ರವಾರ ನ್ಯೂಸ್ 18 ಹಾಗೂ ಜಿಯೊ ಸಿನೆಮಾ ಆಯೋಜಿಸಿದ್ದ ವರ್ಚುವಲ್ ಮಾಧ್ಯಮ ಸಂವಾದದಲ್ಲಿ ಪ್ರತಿಕ್ರಿಯಿಸಿದರು.

'ಸ್ಮೃತಿ ಅವರು ಅತಿಹೆಚ್ಚು ಮೌಲ್ಯ ಗಳಿಸಿ ಆಯ್ಕೆಯಾದವರು. ಎರಡನೇಯದಾಗಿ; ವಿರಾಟ್ ಕೊಹ್ಲಿಯವರಂತಹ ಖ್ಯಾತ ಆಟಗಾರ ಪ್ರತಿನಿಧಿಸುವ ಫ್ರ್ಯಾಂಚೈಸಿಯಲ್ಲಿ ಆಡುತ್ತಿದ್ದಾರೆ. ಆರ್‌ಸಿಬಿ ಪುರುಷರ ತಂಡದಲ್ಲಿ ವಿರಾಟ್ ಜೊತೆಗೆ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್‌ ಗೇಲ್ ಅವರು ಆಡಿದ್ದಾರೆ. ಅದರಿಂದಾಗಿ ತಂಡಕ್ಕೆ ದೊಡ್ಡ ಹೆಸರಿದೆ. ಆದರೂ ಇದುವರೆಗೆ ಐಪಿಎಲ್‌ನಲ್ಲಿ ಪ್ರಶಸ್ತಿ ಜಯಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಸ್ಮೃತಿ ಬಳಗದ ಮೇಲೆ ಡಬ್ಲ್ಯುಪಿಎಲ್‌ನಲ್ಲಿ ನಿರೀಕ್ಷೆಗಳು ಇದ್ದರು. ಈ ಎಲ್ಲ ಅಂಶಗಳು ಸ್ಮೃತಿ ಮೇಲೆ ಒತ್ತಡ ಹೆಚ್ಚಿಸಿರುವ ಸಾಧ್ಯತೆ ಇದೆ. ಅದರಿಂದಾಗಿ ತವರು ತಮ್ಮ ಬ್ಯಾಟಿಂಗ್‌ನಲ್ಲಿ ಲಯ ಕಳೆದುಕೊಂಡಿದ್ಧಾರೆ. ಅದೂ ಇನ್ನಷ್ಟು ಒತ್ತಡ ಹೆಚ್ಚಿಸಿದೆ' ಎಂದು ಭಾರತ ತಂಡದ ಮಾಜಿ ಮಧ್ಯಮವೇಗಿ ವೆಂಕಟೇಶ್ ಪ್ರಸಾದ್ ಅಭಿಪ್ರಾಯಪಟ್ಟರು.

'ಸ್ಮೃತಿ ನಾಯಕತ್ವದಲ್ಲಿಯೂ ವೈಫಲ್ಯ ಅನುಭವಿಸಿದ್ದಾರೆ. ಆರ್‌ಸಿಬಿಯು ತಂಡವಾಗಿ ಆಡುವಲ್ಲಿ ಎಡವಿದೆ. ಸ್ಮೃತಿಗೆ ಸಹ ಆಟಗಾರ್ತಿಯರಿಂದ ಉತ್ತಮ ಬೆಂಬಲ ಸಿಗುತ್ತಿಲ್ಲ. ತಂಡ ಸಂಯೋಜನೆಯು ಕೂಡ ಹದ ತಪ್ಪಿದೆ' ಎಂದರು.

'ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಅವರು ಮಹಿಳಾ ಕ್ರಿಕೆಟ್‌ನ ದಿಗ್ಗಜರು. ಅದರಲ್ಲೂ ಮಿಥಾಲಿ ರಾಜ್ ಅವರ ಮಟ್ಟಕ್ಕೆ ಬೆಳೆಯುವ ಪ್ರತಿಭೆ ಶಫಾಲಿ ವರ್ಮಾ, ಸ್ಮೃತಿ ಮಂದಾನ, ಜಿಮಿಮಾ ರಾಡ್ರಿಗಸ್, ಹರ್ಲಿನ್ ಡಿಯೊಲ್ ಮತ್ತು ಇನ್ನೂ ಕೆಲವರಲ್ಲಿದೆ. ಆದರೆ ಜೂಲನ್ ಅವರಂತೆ ಉತ್ತಮ ಮಧ್ಯಮವೇಗಿಗಳು ಕೆಲವರಿದ್ದಾರೆ. ಅವರು ಹಂತಹಂತವಾಗಿ ಸಿದ್ಧವಾಗಬೇಕಿದೆ. ಎಲ್ಲ ಕಡೆ ಬ್ಯಾಟಿಂಗ್ ಸ್ನೇಹಿ ಪಿಚ್‌ಗಳಾಗಿಬಿಟ್ಟರೆ ವೇಗಿಗಳನ್ನು ಬೆಳೆಸುವುದು ಕಷ್ಟವಾಗಬಹುದು. ನಮ್ಮಲ್ಲಿ ಸ್ಪಿನ್ನರ್‌ಗಳಿದ್ದಾರೆ. ಈ ಹಿಂದೆ ಇದ್ದ ವಲಯವಾರು ಪದ್ಧತಿಯ ರೀತಿಯಲ್ಲಿ ಟೂರ್ನಿಗಳು ನಡೆಯಬೇಕು. ತರಬೇತಿ ಶಿಬಿರಗಳನ್ನು ಆಯೋಜಿಸಬೇಕು' ಎಂದರು.

ವೀಕ್ಷಕ ವಿವರಣೆಗಾರ ಕಾರ್ಯದ ಅನುಭವ ಹಂಚಿಕೊಂಡ ಅವರು, 'ನಾನು ಹೆಚ್ಚು ಕ್ರಿಕೆಟ್ ನೋಡುವುದಿಲ್ಲ. ಕೋಚಿಂಗ್ ಮಾಡುವಾಗ ನೋಡುತ್ತಿದ್ದೆ. ನಾನು ಕಟ್ಟಾ ವೀಕ್ಷಕನಲ್ಲ. ಆದರೆ ಈಗ ಕಾಮೆಂಟ್ರಿಯಲ್ಲಿರುವುದರಿಂದ ನೋಡುತ್ತಿರುವೆ. ಬಹಳ ಸಂತೋಷವಾಗುತ್ತಿದೆ. ಮಹಿಳಾ ಕ್ರಿಕೆಟ್‌ನಲ್ಲಿ ಎಷ್ಟೊಂದು ಪ್ರತಿಭೆಗಳಿರುವುದನ್ನು ನೋಡಿ ಆನಂದವಾಗಿದೆ' ಎಂದರು.