ಪಟಾಕಿಗೆ ಬೆದರಿ ತಿರುಗಿದ ಆನೆ: ದಿಕ್ಕಾಪಾಲಾಗಿ ಓಡಿದ ಜನ- ಜಂಬೂಸವಾರಿ ಸ್ಥಗಿತ!

ಪಟಾಕಿಗೆ ಬೆದರಿ ತಿರುಗಿದ ಆನೆ: ದಿಕ್ಕಾಪಾಲಾಗಿ ಓಡಿದ ಜನ- ಜಂಬೂಸವಾರಿ ಸ್ಥಗಿತ!

ಮಂಡ್ಯ: ಇಂದಿನಿಂದ ಮೂರು ದಿನ ಪ್ರಸಿದ್ಧ ಶ್ರೀರಂಗಪಟ್ಟಣ ದಸರಾ ನಡೆಯುತ್ತಿದ್ದು, ಪಟಾಕಿಯಿಂದಾಗಿ ಜಂಬೂ ಸವಾರಿ ಸ್ಥಗಿತಗೊಳಿಸಬೇಕಾದ ಘಟನೆ ನಡೆದಿದೆ.
ಗೋಪಾಲಸ್ವಾಮಿ ಎಂಬ ಆನೆ ಮರದ ಅಂಬಾರಿ ಹೊತ್ತಿತ್ತು. ಎಲ್ಲವೂ ಸುಗಮವಾಗಿಯೇ ಸಾಗುತ್ತಿತ್ತು. ಜಂಬೂ ಸವಾರಿಯಲ್ಲಿ ಎಲ್ಲೆಡೆ ಹರ್ಷೋದ್ಗಾರಗಳು ಕೇಳಿಬರುತ್ತಿದ್ದವು.

ಶ್ರೀರಂಗಪಟ್ಟಣದ ಬನ್ನಿಮಂಟಪದ ಸಮೀಪ ಬರುತ್ತಿದ್ದಂತೆಯೇ ಪಟಾಕಿ ಸಿಡಿಸಿ ಇನ್ನಷ್ಟು ಸಂಭ್ರಮ ಆಚರಿಸಲು ಹೋಗಿದ್ದೇ ಎಡವಟ್ಟಾಗಿ ಹೋಯಿತು.

ಈ ಶಬ್ದಕ್ಕೆ ಅಂಬಾರಿ ಹೊತ್ತಿದ್ದ ಗೋಪಾಲಸ್ವಾಮಿ ಆನೆ ಬೆದರಿಹೋಯಿತು. ಗಾಬರಿಗೊಂಡು ಒಂದು ಸುತ್ತು ತಿರುಗಿತು. ಆನೆ ಹೀಗೆ ಮಾಡುತ್ತಿದ್ದಂತೆಯೇ ಅಲ್ಲಿದ್ದ ಜನರು ಕೂಡ ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದರು. ನಂತರ ವಾದ್ಯ, ಧ್ವನಿವರ್ಧಕ ಬಂದ್ ಮಾಡಿ ಗೋಪಾಲಸ್ವಾಮಿಯನ್ನು ಸಮಾಧಾನ ಮಾಡಲಾಯಿತಾದರೂ ಈ ಅಚಾನಕ್‌ ಘಟನೆಯಿಂದಾಗಿ ಜಂಬೂ ಸವಾರಿ ಸ್ಥಗಿತಗೊಳಿಸಲಾಯಿತು.

ಪುಷ್ಪಾರ್ಚನೆ ನೆರವೇರಿಸಿ ಜಂಬೂ ಸವಾರಿ ಸ್ಥಗಿತಗೊಳಿಸಿ ನಂತರ ಆನೆ ಮೇಲಿದ್ದ ಮರದ ಅಂಬಾರಿಯನ್ನು ಸಿಬ್ಬಂದಿ ಕಳಚಿದರು. ಮೈಸೂರಿನಲ್ಲೂ ಪಟಾಕಿ ಟ್ರೈನಿಂಗ್ ಹಾಗೂ ಪಿರಂಗಿ ತಾಲಿಮಿನ ವೇಳೆಯಲ್ಲೂ ಗೋಪಾಲಸ್ವಾಮಿ ಹೆದರಿತ್ತು. ಆದರೂ ಇಲ್ಲಿ ಅದನ್ನು ಕರೆತರಲಾಗಿತ್ತು. ನಂತರ ಜಂಬೂ ಸವಾರಿ ಇಲ್ಲದೇ ಮೆರವಣಿಗೆ ಮುಂದುವರೆಯಿತು. ಬೆಳ್ಳಿ ರಥದಲ್ಲಿ ಚಾಮುಂಡೇಶ್ವರಿ ವಿಗ್ರಹ ಹೊತ್ತು ಮೆರವಣಿಗೆ ನಡೆಸಲಾಯಿತು

ಇಂದು ಬೆಳಗ್ಗೆ ಶ್ರೀರಂಗಪಟ್ಟಣದ ದಸರಾವನ್ನು ಆದಿ ಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದ್ದರು. ಚುಂಚಶ್ರೀ ಜತೆ ಸಚಿವ ಕೆ.ಸಿ.ನಾರಾಯಣಗೌಡ, ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಹಲವರು ಗಣ್ಯರು ಪುಷ್ಟಾರ್ಚನೆ ಸಲ್ಲಿಸಿದ್ದರು. ಶುಭ ಕುಂಭ ಲಗ್ನದಲ್ಲಿ ಶ್ರೀರಂಗಪಟ್ಟಣದ ಬನ್ನಿ ಮಂಟಪದಿಂದ ಜಂಬೂ ಸವಾರಿ ಆರಂಭವಾಗಿತ್ತು.

ಮೆರವಣಿಗೆಯಲ್ಲಿ 25ಕ್ಕೂ ಹೆಚ್ಚು ಕಲಾತಂಡ ಭಾಗಿಯಾಗಿದ್ದವು. ಇಂದು ಸಂಜೆ ಶ್ರೀರಂಗ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.