ಫೇಸ್‌ಬುಕ್ ಸೇವೆ ಸ್ಥಗಿತಗೊಂಡಿದ್ದಕ್ಕೆ ಮಾರ್ಕ್ ಜುಕರ್‌ಬರ್ಗ್ ಕಳೆದುಕೊಂಡ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ..?
ಅಕ್ಟೋಬರ್ 4 ಅಂದರೆ ನಿನ್ನೆ ರಾತ್ರಿ (ಭಾರತೀಯ ಕಾಲಮಾನದಲ್ಲಿ) ಜಗತ್ತಿನಾದ್ಯಂತ ಫೇಸ್‌ಬುಕ್ ಸೇವೆ ಹಾಗೂ ಫೇಸ್‌ಬುಕ್ ಇಂಕ್‌ನ ಇನ್ಸ್ಟಾಗ್ರಾಮ್ ಹಾಗೂ ವಾಟ್ಸ್‌ಆಯಪ್ ಸೇವೆಯಲ್ಲೂ ಕೆಲ ಕಾಲ ವ್ಯತ್ಯಯವಾಗಿತ್ತು. ಹಲವರು ಈ ಸಮಸ್ಯೆಯನ್ನು ಎದುರಿಸಿದರು. ಇದರಿಂದ ಫೇಸ್‌ಬುಕ್ ಕಂಪನಿಯ ವಿರುದ್ಧ ಹಲವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಸೇರಿ ಹಲವೆಡೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಸೇವೆಯ ವ್ಯತ್ಯಯ, ಆಕ್ರೋಶದ ಪರಿಣಾಮ ಎಷ್ಟು ಅಂತೀರಾ..? ಬರೋಬ್ಬರಿ ಸುಮಾರು 7 ಬಿಲಿಯನ್ ಡಾಲರ್..!
ಹೌದು, ವಿಷಲ್ ಬ್ಲೋವರ್ ಪರಿಣಾಮದಿಂದ ಹಾಗೂ ಫೇಸ್‌ಬುಕ್ ಹಾಗೂ ಫೇಸ್‌ಬುಕ್ ಇಂಕ್‌ನ ಇತರ ಸೋಶಿಯಲ್ ಮೀಡಿಯಾ ಸೇವೆ ವ್ಯತ್ಯಯವಾದ ಕೆಲವೇ ಗಂಟೆಗಳಲ್ಲಿ ಫೇಸ್‌ಬುಕ್ ಕಂಪನಿಯ ಸಹ ಸಂಸ್ಥಾಪಕ ಮಾಕ್ ಜುಕರ್‌ಬರ್ಗ್ ವೈಯಕ್ತಿಕ ಸಂಪತ್ತು ಕೆಲವೇ ಗಂಟೆಗಳಲ್ಲಿ ಸುಮಾರು 7 ಬಿಲಿಯನ್ ಡಾಲರ್‌ಗಳಷ್ಟು ಕುಸಿದಿದೆ.
ಇದರಿಂದ ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಅವರನ್ನು ಕೆಳಕ್ಕೆ ತಳ್ಳಿತು. ಫೇಸ್‌ಬುಕ್ ಇಂಕ್‌ನ ಪ್ರಮುಖ ಉತ್ಪನ್ನಗಳು ಆಫ್‌ಲೈನ್‌ಗೆ ಹೋದ ಕಾರಣ ಜುಕರ್‌ಬರ್ಗ್ ಸಂಪತ್ತು ಕರಗಿದೆ.
ಷೇರುಗಳ ಮಾರಾಟದ ಪರಿಣಾಮ ಸಾಮಾಜಿಕ ಮಾಧ್ಯಮ ದೈತ್ಯ ಜುಕರ್‌ಬರ್ಗ್ ಷೇರುಗಳು ಸೋಮವಾರ ಶೇ. 5ರಷ್ಟು ಕುಸಿದಿದೆ. ಅಲ್ಲದೆ, ಸೆಪ್ಟೆಂಬರ್ ಮಧ್ಯಭಾಗದಿಂದ ಒಟ್ಟಾರೆ ಸುಮಾರು ಶೇ. 15ರಷ್ಟು ಷೇರುಗಳ ಮೌಲ್ಯ ಕುಸಿದಿದೆ.
ಸೋಮವಾರದ ಷೇರುಗಳ ಕುಸಿತದ ಕಾರಣದಿಂದ ಜುಕರ್‌ಬರ್ಗ್‌ನ ಆಸ್ತಿ ಮೌಲ್ಯ 120.9 ಬಿಲಿಯನ್ ಡಾಲರ್‌ಗೆ ಕುಸಿದಿದ್ದು, ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಅಗ್ರ ಶ್ರೀಮಂತರ ಪೈಕಿ 5ನೇ ಸ್ಥಾನಕ್ಕಿಳಿದಿದ್ದಾರೆ. ಬಿಲ್ ಗೇಟ್ಸ್ ನಂತರದ ಸ್ಥಾನಕ್ಕೆ ಕುಸಿದಿದ್ದಾರೆ ಜುಕರ್‌ಬರ್ಗ್. ಸೆಪ್ಟೆಂಬರ್ 13ರಂದು ಸುಮಾರು 140 ಶತಕೋಟಿ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದ ಜುಕರ್‌ಬರ್ಗ್‌ನ ಆಸ್ತಿ ಬರೋಬ್ಬರಿ ಸುಮಾರು 19 ಬಿಲಿಯನ್ ಡಾಲರ್ ಸಂಪತ್ತನ್ನು ಕಳೆದುಕೊಂಡಿದ್ದಾರೆ.
ಸೆಪ್ಟೆಂಬರ್ 13 ರಂದು, ವಾಲ್ ಸ್ಟ್ರೀಟ್ ಜರ್ನಲ್ ಆಂತರಿಕ ದಾಖಲೆಗಳ ಸಂಗ್ರಹವನ್ನು ಆಧರಿಸಿ ಕಥೆಗಳ ಸರಣಿಯನ್ನು ಪ್ರಕಟಿಸಲು ಪ್ರಾರಂಭಿಸಿತು. ಇದರಲ್ಲಿ, ಫೇಸ್‌ಬುಕ್ ತನ್ನ ಉತ್ಪನ್ನಗಳಿಂದ ಆಗುತ್ತಿರುವ ವ್ಯಾಪಕ ಸಮಸ್ಯೆಗಳ ಬಗ್ಗೆ ತಿಳಿದಿದ್ದರೂ, ಸಮಸ್ಯೆಗಳನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುತ್ತಿಲ್ಲ ಎಂದು ಬಹಿರಂಗಪಡಿಸಿತು.
ಇನ್ಸ್ಟಾಗ್ರಾಮ್‌ನಿಂದ ಹದಿಹರೆಯದ ಹುಡುಗಿಯರ ಮಾನಸಿಕ ಆರೋಗ್ಯಕ್ಕೆ ಹಾನಿ ಹಾಗೂ ಜನವರಿ 6ರ ಅಮೆರಿಕದ ಕ್ಯಾಪಿಟಲ್ ಗಲಭೆಗಳ ಬಗ್ಗೆ ತಪ್ಪು ಮಾಹಿತಿ ಹರಡುವಿಕೆ ಮುಂತಾದ ಸಮಸ್ಯೆಗಳು ಬಹಿರಂಗಗೊಂಡ ಬಳಿಕ ಮಾರ್ಕ್ ಜುಕರ್‌ಬರ್ಗ್ ಸಂಪತ್ತು ಕರಗುತ್ತಲೇ ಇದೆ.