38 ಎಸೆತಗಳಲ್ಲಿ ಸ್ಫೋಟಕ 86 ರನ್ ಗಳಿಸಿ ಮಿಂಚಿದ ಕೀರನ್ ಪೊಲಾರ್ಡ್

38 ಎಸೆತಗಳಲ್ಲಿ ಸ್ಫೋಟಕ 86 ರನ್ ಗಳಿಸಿ ಮಿಂಚಿದ ಕೀರನ್ ಪೊಲಾರ್ಡ್

ಯುಎಇಯಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಲೀಗ್ ಟಿ20 ಲೀಗ್‌ನಲ್ಲಿ ಕೀರನ್ ಪೊಲಾರ್ಡ್ ಸ್ಫೋಟಕ ಇನ್ನಿಂಗ್ಸ್ ಆಡಿ ಮಿಂಚಿದ್ದಾರೆ. ಎಂಐ ಎಮಿರೇಟ್ಸ್ ತಂಡವನ್ನು ಮುನ್ನಡೆಸುವ ಪೊಲಾರ್ಡ್ ದುಬೈ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 38 ಎಸೆತಗಳಲ್ಲಿ 86 ರನ್ ಗಳಿಸಿದರು.

ಜನವರಿ 22ರಂದು ಭಾನುವಾರ ನಡೆದ ಪಂದ್ಯದಲ್ಲಿ ಪೊಲಾರ್ಡ್ ಈ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಅವರ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ಎಂಐ ಎಮಿರೇಟ್ಸ್ ತಂಡ ಸೋಲನುಭವಿಸಿತು.

ಅಬುದಾಬಿಯ ಶೇಕ್‌ ಜಾಯೆದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದುಬೈ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 222 ರನ್ ಗಳಿಸಿತು. ದುಬೈ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಜೋ ರೂಟ್ 54 ಎಸೆತಗಳಲ್ಲಿ 82 ರನ್‌ ಗಳಿಸಿ ಮಿಂಚಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್ ಸೇರಿದ್ದವು.

ದುಬೈ ಕ್ಯಾಪಿಟಲ್ಸ್ ತಂಡದ ನಾಯಕ ರೋವೆಮ್ ಪೋವೆಲ್ ಮತ್ತೊಂದು ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೇವಲ 41 ಎಸೆತಗಳಲ್ಲಿ 4 ಬೌಂಡರಿ 10 ಭರ್ಜರಿ ಸಿಕ್ಸರ್ ಸಹಿತ 97 ರನ್ ಗಳಿಸಿದರು. ಇವರಿಬ್ಬರ ಭರ್ಜರಿ ಆಟದ ನೆರವಿನಿಂದ ದುಬೈ ಕ್ಯಾಪಿಟಲ್ಸ್ 222 ರನ್‌ಗಳ ಬೃಹತ್ ಮೊತ್ತ ಗಳಿಸಿತು.

ಕೀರನ್ ಪೊಲಾರ್ಡ್ ಆರ್ಭಟ

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಎಂಐ ಎಮಿರೇಟ್ಸ್ ಆರಂಭದಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ವಿಲ್ ಸಮೀದ್ 16 ಎಸೆತಗಳಲ್ಲಿ 13 ರನ್ ಗಳಿಸಿ ಔಟಾದರೆ, ವಾಸೀಮ್ 10, ನಿಕೋಲಸ್ ಪೂರನ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

ನಂತರ ಕ್ರೀಸ್‌ಗೆ ಬಂದ ಕೀರನ್ ಪೊಲಾರ್ಡ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. 38 ಎಸೆತಗಳಲ್ಲಿ 8 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ 226.32 ಸ್ಟ್ರೈಕ್‌ರೇಟ್‌ನಲ್ಲಿ 86 ರನ್‌ ಗಳಿಸಿದರು. ಪೊಲಾರ್ಡ್ ಅತ್ಯುತ್ತಮ ಇನ್ನಿಂಗ್ಸ್ ಹೊರತಾಗಿಯೂ ದುಬೈ ಕ್ಯಾಪಿಟಲ್ಸ್ ಎಂಐ ಎಮಿರೇಟ್ಸ್ ವಿರುದ್ಧ 16 ರನ್‌ಗಳಿಂದ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಕೀರನ್ ಪೊಲಾರ್ಡ್ 2023ರ ಐಪಿಎಲ್‌ ಮಿನಿ ಹರಾಜಿಗೆ ಮುನ್ನ ನಿವೃತ್ತಿ ಘೋಷಣೆ ಮಾಡಿದ್ದರು. ಐಪಿಎಲ್‌ನಿಂದ ನಿವೃತ್ತಿಯಾದರೂ ಅವರ ಸ್ಫೋಟಕ ಬ್ಯಾಟಿಂಗ್‌ ಮಾತ್ರ ಮುಂದುವರೆದಿದೆ. ಅವರ ಬ್ಯಾಟಿಂಗ್ ನೋಡಿದ ಅಭಿಮಾನಿಗಳು ಪೊಲಾರ್ಡ್ ಐಪಿಎಲ್‌ನಲ್ಲಿ ಆಡಬೇಕಿತ್ತು ಎನ್ನುವ ಇಚ್ಚೆ ವ್ಯಕ್ಯಪಡಿಸಿದ್ದಾರೆ.