12 ವರ್ಷಗಳ ಕಾಲ ಕಾದು ಚೊಚ್ಚಲ ಟೆಸ್ಟ್ ವಿಕೆಟ್ ಪಡೆದ ಜಯ್‌ದೇವ್ ಉನಾದ್ಕಟ್

12 ವರ್ಷಗಳ ಕಾಲ ಕಾದು ಚೊಚ್ಚಲ ಟೆಸ್ಟ್ ವಿಕೆಟ್ ಪಡೆದ ಜಯ್‌ದೇವ್ ಉನಾದ್ಕಟ್

ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ವೇಗಿ ಜಯ್‌ದೇವ್ ಉನಾದ್ಕಟ್ ಅವಕಾಶ ಪಡೆದುಕೊಳ್ಳುವಲ್ಲಿ ಸಫಲವಾಗಿದ್ದಾರೆ. ಮೊಹಮ್ಮದ್ ಶಮಿ ಗಾಯಗೊಂಡ ಕಾರಣದಿಂದಾಗಿ ಈ ಸರಣಿಯಲ್ಲಿ ಅವಕಾಶ ಗಿಟ್ಟಿಸಿಕೊಂಡ ಜಯ್‌ದೇವ್ ಉನಾದ್ಕಟ್ ಸುದೀರ್ಘ 12 ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು.

ಇದೀಗ ಆಡುವ ಬಳಗದಲ್ಲಿಯೂ ಅವಕಾಶ ಗಿಟ್ಟಿಸಿಕೊಂಡಿರುವ ಅವರು ತಮ್ಮ ಚೊಚ್ಚಲ ಟೆಸ್ಟ್ ವಿಕೆಟ್ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.

31ರ ಹರೆಯದ ಉನಾದ್ಕಟ್ 2010ರ ಡಿಸೆಂಬರ್‌ನಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆದರೆ ಅದಾದ ಬಳಿಕ ಮತ್ತೆ ಅವರಿಗೆ ಟೆಸ್ಟ್ ತಂಡದಲ್ಲಿ ಅವಕಾಶ ದೊರೆತಿರಲಿಲ್ಲ. ಆದರೆ ಎರಡನೇ ಟೆಸ್ಟ್‌ನಲ್ಲಿ ಕುಲ್ದೀಪ್ ಯಾದವ್ ಅವರನ್ನು ಹೊರಗಿರಿಸಿ ಜಯ್‌ದೇವ್ ಉನಾದ್ಕಟ್‌ಗೆ ಅವಕಾಶ ನೀಡಲಾಗಿದೆ. ಕುಲ್ದೀಪ್ ಯಾದವ್ ಮೊದಲ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.

ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಯುವ ಆಟಗಾರ ಜಾಕಿರ್ ಹಸನ್ ಅವರನ್ನು 15 ರನ್‌ಗಳಿಸಿದ್ದಾಗ ಉನಾದ್ಕಟ್ ಔಟ್ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತಕ್ಕೆ ಆರಂಭಿಕ ಯಶಸ್ಸು ನೀಡಿದರು. ಲೆಂತ್ ಎಸೆತವನ್ನು ಕಟ್ ಮಾಡಲು ಪ್ರಯತ್ನಿಸಿದ ಜಾಕಿರ್ ನಾಲ್ಕನೇ ಸ್ಲಿಪ್‌ನಲ್ಲಿದ್ದ ನಾಯಕ ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಮೂಲಕ ಟೆಸ್ಟ್ ಮಾದರಿಯಲ್ಲಿ ತಮ್ಮ ಚೊಚ್ಚಲ ವಿಕೆಟ್ ಪಡೆದುಕೊಂಡರು. ಆದರೆ ಇದಕಲ್ಕಾಗಿ 12 ವರ್ಷಗಳ ಕಾಲ ಕಾದಿದ್ದಾರೆ ಎಂಬುದು ಮಾತ್ರ ನಿಜ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಬಾಂಗ್ಲಾದೇಶ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಭೋಜನ ವಿರಾಮದ ವೇಳೆಗೆ 82 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದೆ ಆತಿಥೆಯ ತಂಡ. ಮೊದಲ ವಿಕೆಟ್ ಜಯ್‌ದೇವ್ ಉನಾದ್ಕಟ್ ಪಾಲಾದರೆ ಎರಡನೇ ವಿಕೆಟ್ ಆರ್ ಅಶ್ವಿನ್ ಪಾಲಾಗಿದೆ.

ಇತ್ತಂಡಗಳ ಆಡುವ ಬಳಗ

ಟೀಮ್ ಇಂಡಿಯಾ: ಕೆಎಲ್ ರಾಹುಲ್(ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರಿಷಬ್ ಪಂತ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್

ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೊ, ಜಾಕಿರ್ ಹಸನ್, ಮೊಮಿನುಲ್ ಹಕ್, ಲಿಟ್ಟನ್ ದಾಸ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್(ನಾಯಕ), ನೂರುಲ್ ಹಸನ್(ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ತಸ್ಕಿನ್ ಅಹ್ಮದ್