ಬೆಂಗಳೂರಿನ ಜನತೆಗೆ ಗುಡ್ ನ್ಯೂಸ್ : ಬಡವರಿಗೆ ಉಚಿತ ಸೇವೆ ನೀಡುವ 108 `ನಮ್ಮ ಕ್ಲಿನಿಕ್'ಗೆ ನಾಳೆ ಸಿಎಂ ಬೊಮ್ಮಾಯಿ ಚಾಲನೆ

ಬೆಂಗಳೂರು : ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಬಿಎಂಪಿ ವ್ಯಾಪ್ತಿಯ 243 ವಾರ್ಡ್ ಗಳ ಪೈಕಿ 108 ವಾರ್ಡ್ ಗಳಲ್ಲಿ ನಮ್ಮ ಕ್ಲಿನಿಕ್ ಗೆ ಚಾಲನೆ ನೀಡಲಿದ್ದಾರೆ.
ನಾಳೆ ಬೆಳಗ್ಗೆ 11 ಗಂಟೆಗೆ ಸಿಎಂ ಬೊಮ್ಮಾಯಿ ಮಹಾಲಕ್ಷ್ಮೀಪುರ ವಾರ್ಡ್ ನ ನಮ್ಮ ಕ್ಲಿನಿಕ್ ಗೆ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ.
ಬಿಬಿಎಂಪಿಯ 243 ವಾರ್ಡ್ ಗಳು ಸೇರಿದಂತೆ ರಾಜ್ಯದಲ್ಲಿ 438 ನಮ್ಮ ಕ್ಲಿನಿಕ್ ಆರಂಭಿಸುವುದಾಗಿ ರಾಜ್ಯ ಸರ್ಕಾರ ಕಳೆದ ಬಜೆಟ್ ನಲ್ಲಿ ಘೋಷಿಸಿತ್ತು. ಅದರಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 114 ಅನ್ನು ಕಳೆದ ಡಿಸೆಂಬರ್ ನಲ್ಲಿ ಚಾಲನೆ ನೀಡಲಾಗಿತ್ತು. ಇದೀಗ ಬಿಬಿಎಂಪಿ ವ್ಯಾಪ್ತಿಯ 108 ನಮ್ಮ ಕ್ಲಿನಿಕ್ ಗೆ ನಾಳೆ ಸಿಎಂ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.
ಈ ಎಲ್ಲಾ ಆರೋಗ್ಯ ಸೇವೆಗಳು ಸಂಪೂರ್ಣ ಉಚಿತ
ನಮ್ಮ ಕ್ಲಿನಿಕ್ಗಳಲ್ಲಿ 12 ರೀತಿಯ ಆರೋಗ್ಯ ಸೇವೆಗಳು ಲಭ್ಯ ಇರಲಿದೆ. ತಲಾ ಒಬ್ಬ ವೈದ್ಯಾಧಿಕಾರಿ, ನರ್ಸಿಂಗ್ ಸ್ಟಾಫ್, ಲ್ಯಾಬ್ ಟೆಕ್ನಿಷಿಯನ್, ಡಿ ದರ್ಜೆ ನೌಕರರು ಇಲ್ಲಿ ಇರಲಿದ್ದಾರೆ. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಶಿಶುವಿನ ಸಮಗ್ರ ಆರೈಕೆ, ಬಾಲ್ಯ ಮತ್ತು ಹದಿಹರಯದವರಿಗೆ ಸೇವೆಗಳು, ಸಾರ್ವತ್ರಿಕ ಲಸಿಕಾಕರಣದ ಸೇವೆಗಳು, ಕುಟುಂಬ ಕಲ್ಯಾಣ ಗರ್ಭ ನಿರೋಧಕ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಸೇವೆ, ಮಧುಮೇಹ, ರಕ್ತದೊತ್ತಡಕ್ಕೆ ಚಿಕಿತ್ಸೆ , ಸಕ್ಕರೆ ಕಾಯಿಲೆ, ದೀರ್ಘಾವಧಿ ಕಾಯಿಲೆಗಳು, ಬಾಯಿ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್, ಬಾಯಿಯ ಆರೋಗ್ಯ ಸಮಸ್ಯೆಗಳು ಮತ್ತು ಸೇವೆಗಳು, ಕಣ್ಣಿನ ತಪಾಸಣೆ, ಮೆಂಟಲ್ ಹೆಲ್ತ್ಗೆ ಸಂಬಂಧಿಸಿದ ಮೂಲಭೂತ ಸೇವೆಗಳು ಸೇರಿದಂತೆ ಬೇರೆ ಆಸ್ಪತ್ರೆಗಳಿಗೆ ರೆಫರಲ್ ಸೇವೆಗಳು ಇಲ್ಲಿ ಲಭ್ಯವಾಗಲಿವೆ.
ವೃದ್ಧಾಪ್ಯ ಆರೈಕೆ, ತುರ್ತು ವೈದ್ಯಕೀಯ ಸೇವೆಗಳು, ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಔಷಧಗಳು ಸಂಪೂರ್ಣ ಉಚಿತವಾಗಿರಲಿದೆ. 14 ಪ್ರಯೋಗ ಶಾಲಾ ಪರೀಕ್ಷೆಗಳು ಇಲ್ಲಿ ಲಭ್ಯವಿದ್ದು ಟೆಲಿ ಕನ್ಸಲ್ಟೇಷನ್ ಸರ್ವೀಸಸ್, ಕ್ಷೇಮ ಚಟುವಟಿಕೆಗಳು ಕೂಡ ಉಚಿತವಾಗಿವೆ. ಸೋಮವಾರದಿಂದ ಶನಿವಾರ ತನಕ ಬೆಳಗ್ಗೆ 9 ರಿಂದ ಸಂಜೆ 4.30ರ ತನಕ ಈ ಸೇವೆ ಲಭ್ಯವಿದ್ದು ಭಾನುವಾರ ರಜೆ ಇರಲಿದೆ. ಬಡಾವಣೆಯ ವ್ಯಾಪ್ತಿಯಲ್ಲಿ ಈ ಕ್ಲಿನಿಕ್ಗಳು ತಲೆ ಎತ್ತುವುದರಿಂದ ಸುಲಭವಾಗಿ ಆರೋಗ್ಯ ಸೇವೆ ಸಿಗಲಿದೆ.