ಹೃದಯಾಘಾತದಿಂದ ಉಪನ್ಯಾಸಕ ಸಾವು; ಎದೆನೋವು-ಉಸಿರಾಟದ ಸಮಸ್ಯೆಗೊಳಗಾಗಿ ನಿಧನ

ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವಂಥ ಪ್ರಕರಣಗಳು ಮುಂದುವರಿದಿದ್ದು, ಇಂದು ಆ ಪಟ್ಟಿಗೆ ಇನ್ನೊಂದು ಹೆಸರು ಸೇರಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಮತ್ತೆ ಕೇಳಿ ಬರುತ್ತಿರುವ ಹೃದಯಾಘಾತದಿಂದಾದ ಸಾವಿನ ಸುದ್ದಿ ಆತಂಕವನ್ನು ಹೆಚ್ಚಿಸಿದೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಹೇಶ್ (48) ಸಾವಿಗೀಡಾದ ವ್ಯಕ್ತಿ. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಪುತ್ತೂರಿನ ಪರ್ಲಡ್ಕ ನಿವಾಸಿಯಾಗಿರುವ ಮಹೇಶ್ಗೆ ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಎದೆನೋವು ಉಂಟಾಗಿತ್ತು.
ಬಳಿಕ ಉಸಿರಾಡುವುದು ಕೂಡ ಕಷ್ಟವಾದಾಗ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗಮಧ್ಯೆಯೇ ಅವರು ಸಾವಿಗೀಡಾಗಿದ್ದನ್ನು, ಪುತ್ತೂರು ಆಸ್ಪತ್ರೆ ವೈದ್ಯರು ಖಚಿತಪಡಿಸಿದರು
. ರಾತ್ರಿ ಮಲಗುವಾಗ ಆರೋಗ್ಯವಾಗಿದ್ದ ಇವರು ಬೆಳಗಿನ ಜಾವ ಇದ್ದಕ್ಕಿದ್ದಂತೆ ಅನಾರೋಗ್ಯಗೊಂಡು ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿರುವುದು ಅಚ್ಚರಿ ಹಾಗೂ ಆತಂಕವನ್ನು ಮೂಡಿಸಿದೆ.