ಕೆಲ ವ್ಯಕ್ತಿಗಳು ಸತ್ತ ಮೇಲೂ ಬದುಕುತ್ತಾರೆ ಎಂಬುದಕ್ಕೆ ಹೆಚ್.ಕೆ.ವೀರಣ್ಣಗೌಡರೆ ಸಾಕ್ಷಿ - ಬಸವರಾಜ ಹೊರಟ್ಟಿ ಶ್ಲಾಘನೆ

ಮಂಡ್ಯ : ಮಾಜಿ ಸಂಸದ ದಿ. ಜಿ. ಮಾದೇಗೌಡ, ಎಚ್.ಕೆ. ವೀರಣ್ಣಗೌಡ, ಕೆ.ವಿ. ಶಂಕರೇಗೌಡ ಹಾಗೂ ಮಾಜಿ ಸಚಿವ ದಿ. ನಾಗೇಗೌಡ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಜಿಲ್ಲೆಯ ಅಭಿವೃದ್ಧಿ ಜತೆಗೆ ಲಕ್ಷಾಂತರ ಗ್ರಾಮೀಣ ಮಕ್ಕಳಿಗೆ ಅಕ್ಷರ ಅಭ್ಯಾಸವನ್ನು ಉಣಬಡಿಸಿದ್ದಾರೆಂದು ವಿಧಾನಪರಿಷತ್ ಸಭಾಪತಿ ಬಸವರಾಜು ಎಸ್.
ಮದ್ದೂರು ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ಆಯೋಜಿಸಿದ್ದ 'ಎಚ್.ಕೆ.ವಿ - ಸಾಂಸ್ಕೃತಿಕ ಸೌರಭ-2023' ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು ರಾಜಕೀಯದ ಜತೆಗೆ ಜಿಲ್ಲೆಯಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಮೂಲಕ ವೇದಿಕೆ ಏರಲು ಅವಕಾಶ ಕಲ್ಪಿಸಿದ್ದಾರೆಂದು ಬಣ್ಣಿಸಿದರು.
ಕೆಲ ವ್ಯಕ್ತಿಗಳು ಸತ್ತ ಮೇಲೂ ಬದುಕುತ್ತಾರೆ ಎಂಬುದಕ್ಕೆ ಈ ನಾಯಕರೇ ಕಾರಣರಾಗಿದ್ದಾರೆಂದು ತಿಳಿಸಿದರಲ್ಲದೇ ತಾವು ಶಿಕ್ಷಣ ಸಚಿವರಾಗಿದ್ದ ವೇಳೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಖಾಸಗಿ ಶಾಲೆಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಹಲವು ಬೇಡಿಕೆಗಳನ್ನು ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು, ಸರ್ಕಾರಿ ಶಾಲೆಗಳಂತೆ ಖಾಸಗಿ ಶಾಲೆಗಳಿಗೂ ಹೆಚ್ಚಿನ ಅನುದಾನ ನೀಡುವಂತೆ ಸಂಬಂಧಿಸಿದ ಸಚಿವರೊಟ್ಟಿಗೆ ಚರ್ಚಿಸಿದ್ದು ಇತ್ತೀಚಿನ ದಿನಗಳಲ್ಲಿ ಕೆಲ ಶಿಕ್ಷಣ ಸಂಸ್ಥೆಗಳು ಕಮರ್ಷಿಯಲ್ ಆಗಿ ರೂಪಗೊಂಡಿರುವುದು ಆತಂಕಕಾರಿ ವಿಚಾರವೆಂದ ಅವರು ಖಾಸಗಿ ಶಾಲೆಗಳಿಗೆ ಶೇ.60ರಷ್ಟು ಅನುದಾನ ನೀಡುವಂತೆ ಮನವಿ ಮಾಡಿರುವುದಾಗಿ ಹೇಳಿದರು.
ವೇತನ, ಖಾಲಿ ಇರುವ ಹುದ್ದೆಗಳನ್ನು ತುಂಬಲು ಅವಕಾಶ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಟ್ಟಿಗೆ ಚರ್ಚಿಸಿದ್ದು ಮುಂದಿನ ದಿನಗಳಲ್ಲಿ ಅಗತ್ಯ ಕ್ರಮವಹಿಸುವ ವಿಶ್ವಾಸ ವ್ಯಕ್ತಪಡಿಸಿರಲ್ಲದೆ ಇತ್ತೀಚಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟಕರವಾಗಿದ್ದು ತಮ್ಮ ಗಮನಕ್ಕೂ ಬಂದಿದ್ದು ಮುಂದಿನ ಬಜೆಟ್ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವರೇ ಕಾದು ನೋಡಬೇಕಿದೆ ಎಂದರು.
ಸರ್ಕಾರಿ ಶಾಲೆಗಳಿಗೆ ನೀಡುವ ಸೌಲಭ್ಯಗಳನ್ನು ಖಾಸಗಿ ಶಾಲೆಗಳಿಗೂ ನೀಡುವಂತೆ ಈಗಾಗಲೇ ಶಿಕ್ಷಣ ಸಂಸ್ಥೆಯ ಮಾಲೀಕರ ಮನವಿ ಮಾಡಿದ್ದು ಕೊರೋನಾ ಸಂದರ್ಭದಲ್ಲಿ ಮಕ್ಕಳ ಸಂಖ್ಯೆಯು ಕ್ಷೀಣಿಸಿ ಸಮರ್ಪಕವಾಗಿ ಡೊನೇಷನ್ ವಸೂಲಿಯಾಗದೆ ಅತಂತ್ರ ಸ್ಥಿತಿ ತಲುಪಿದೆ. ತಾವು ಶಿಕ್ಷಣ ಸಚಿವರಾಗಿದ್ದ ವೇಳೆ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ 398 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿ ಅಗತ್ಯವಿರುವ ಜಿಲ್ಲೆಗಳಿಗೆ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜುಗಳ ನಿರ್ಮಾಣಕ್ಕೂ ಅನುದಾನ ಬಿಡುಗಡೆ ಮಾಡಿದ್ದೆ ಮತ್ತು ತಮ್ಮ ಅವಧಿಯಲ್ಲಿ ಬೈಸಿಕಲ್, ಬಿಸಿಯೂಟ, ಪಠ್ಯ ಪುಸ್ತಕ ಹಾಗೂ 48300 ಶಿಕ್ಷಕರ ನೇಮಕ ಮಾಡಿಕೊಂಡಿದ್ದಾಗಿ ತಿಳಿಸಿದರು.
ಖಾಸಗಿ ಶಾಲೆಗಳ ಶಿಕ್ಷಕರು ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವಂತೆ ಒತ್ತಾಯ ಮಾಡುತ್ತಿದ್ದು ಈ ಸಂಬಂಧ ಅಧಿಕಾರಿಗಳೊಟ್ಟಿಗೆ ಚರ್ಚಿಸಿ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡಲು ಸಾಧ್ಯವಿಲ್ಲವೆಂದು ಈಗಾಗಲೇ ಅಧಿಕಾರಿಗಳು ತಿಳಿಸಿದ್ದು ಖಾಸಗಿ ಶಾಲೆಗಳ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸಲಾಗುವುದು ಎಂದರು.
ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಪ್ರಾಸ್ತವಿಕ ನುಡಿಗಳನ್ನಾಡಿದರಲ್ಲದೇ ವೇದಿಕೆ ಮೇಲಿದ್ದ ಪಿಇಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ವಿಜಯಾನಂದ, ಮಾಜಿ ಶಾಸಕಿ ನಾಗಮಣಿ ನಾಗೇಗೌಡ, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಅವರನ್ನು ಸಂಸ್ಥೆ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಸಭಾಪತಿ ಬಸವರಾಜ್ ಎಸ್. ಹೊರಟ್ಟಿ ಹಾಗೂ ಇತರೆ ಗಣ್ಯರನ್ನು ಜಾನಪದ ಸೊಗಡಿನ ಸಿಂಗರಿಸಿದ ಎತ್ತಿನ ಗಾಡಿ ಮೂಲಕ ಸಾಂಸ್ಕೃತಿಕ ಕಲಾತಂಡಗಳೊಟ್ಟಿಗೆ ಮೆರವಣಿಗೆ ಮೂಲಕ ವೇದಿಕೆ ಬಳಿ ಕರೆತರಲಾಯಿತು.
ಈ ವೇಳೆ ಗೌರವಾಧ್ಯಕ್ಷ ಕೆ.ಟಿ. ಚಂದು, ಬಿಇಓ ಸಿ.ಎಚ್. ಕಾಳೀರಯ್ಯ, ಡಿಡಿಪಿಐ ಜವರೇಗೌಡ, ಸಂಸ್ಥೆ ಅಧ್ಯಕ್ಷ ಸ್ವರೂಪ್ ಚಂದ್, ಕಾರ್ಯದರ್ಶಿ ಸಿ. ಅಪೂರ್ವಚಂದ್ರ, ನಿರ್ದೆಶಕರಾದ ರಾಮಲಿಂಗಯ್ಯ, ಜಿ.ಎಸ್. ಶಿವರಾಮು, ಬೋರಯ್ಯ, ಪ್ರಾಂಶುಪಾಲರಾದ ಸಿ.ಎಸ್. ಶಂಕರೇಗೌಡ, ಯು.ಎಸ್. ಶಿವಕುಮಾರ್, ಉಪ ಪ್ರಾಂಶುಪಾಲೆ ಜಿ.ಎಸ್. ನಂದಿನಿ, ಪ್ರಾಧ್ಯಾಪಕರಾದ ಪಂಚಲಿಂಗಯ್ಯ, ರೇವಣ್ಣ, ಪ್ರಕಾಶ್ ಇತರರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ