ಹಿರಿಯ ನಾಯಕರ ಮತ ಸಿಗುವ ನಿರೀಕ್ಷೆ ಇಲ್ಲ: ಶಶಿ ತರೂರ್

ತಿರುವನಂತಪುರ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಸಂಸದ ಶಶಿ ತರೂರ್, ತಾವು ಹಿರಿಯ ನಾಯಕರ ಮತಗಳನ್ನು ನಿರೀಕ್ಷಿಸುತ್ತಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.
ತಿರುವನಂತಪುರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, 'ನಾನು ಸಾಮಾನ್ಯ ಮತದಾರರಿಂದ ಬೆಂಬಲ ನಿರೀಕ್ಷಿಸುತ್ತಿದ್ದೇನೆ.
ಆದಾಗ್ಯೂ, ಮೊಹ್ಸಿನಾ ಕಿದ್ವಾಯಿ, ಸೈಫುದ್ದೀನ್ ಸೋಜ್ ಮತ್ತು ತಂಪನೂರು ರವಿ (ಕೇರಳ) ಅವರಂತಹ ಕೆಲವು ಹಿರಿಯ ನಾಯಕರು ಬೆಂಬಲ ಸೂಚಿಸಿದ್ದಾರೆ ಎಂದು ಅವರು ಇದೇ ವೇಳೆ ಹೇಳಿದರು.
ಪಕ್ಷದ 'ಅಧಿಕೃತ' ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಪರ ಪಕ್ಷದ ಕೆಲವು ಉನ್ನತ ನಾಯಕರು ನಿಲುವು ತಳೆಯುತ್ತಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ವಿವೇಚನೆಯಂತೆ ಮತ ಚಲಾಯಿಸುವಂತೆ ಹೇಳುತ್ತಿದ್ದ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಸುಧಾಕರನ್ ಸೋಮವಾರ ಖರ್ಗೆ ಅವರನ್ನು ಹೊಗಳಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ತರೂರ್ ಅಸಮಾಧಾನ ಹೊರ ಹಾಕಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣಾ ಕಣದಲ್ಲಿ ಮಲ್ಲಿಕಾರ್ಜುನ ಮತ್ತು ಶಶಿ ತರೂರ್ ಅವರಿಬ್ಬರೇ ಉಳಿದಿದ್ದು, ನೇರ ಹಣಾಹಣಿ ಏರ್ಪಟ್ಟಿದೆ. ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, ಅ.19ರಂದು ಫಲಿತಾಂಶ ಹೊರಬೀಳಲಿದೆ.