ಹಾಸನದಲ್ಲಿ ಜೆಡಿಎಸ್ ಟಿಕೆಟ್ ಫೈಟ್ ವಿಚಾರ : ಹೆಚ್ ಡಿಡಿ ಹೇಳಿದ್ದೇನು ಗೊತ್ತಾ
ಹಾಸನ : ಕರ್ನಾಟಕ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಜೆಡಿಎಸ್ ಗೆ ಹಾಸನ ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರ ಕಗ್ಗಂಟಾಗಿ ಪರಿಣಮಿಸಿದ್ದು, ಇದೀಗ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರು ನಿನ್ನೆ ಹಾಸನದ ಜೆಡಿಎಸ್ ಮುಖಂಡರ ಜೊತೆಗೆ ಮಹತ್ವದ ಸಭೆ ನಡೆಸಿದ್ದಾರೆ.
ಸಭೆ ಬಳಿಕ ಮಾತನಾಡಿದ ಹೆಚ್ ಡಿ ದೇವೇಗೌಡ ಹಾಸನದಲ್ಲಿ ನಿಷ್ಟಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.ಹಾಸನ ಟಿಕೆಟ್ ವಿಚಾರದಲ್ಲಿ ಯಾರೂ ಉತ್ತಡ ಹಾಕಬೇಡಿ, ಹಾಸನದ ಪರಿಸ್ಥಿತಿ ನನಗೆ ಗೊತ್ತಿದೆ.ಅನಿವಾರ್ಯವಾದರೆ ನಾನೇ ಬಂದು ಪ್ರಚಾರ ಮಾಡುತ್ತೇನೆ. ಹಾಸನ ಟಿಕೆಟ್ ಬಗ್ಗೆ ಈಗಾಗಲೇ ನಿರ್ಧಾರವಾಗಿದೆ, ಯಾರೂ ಒತ್ತಡ ಹಾಕಬೇಡಿ ಎಂದು ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಮಾಜಿ ಸಚಿವ ಎಚ್.ಡಿ. ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಹಾಗೂ ಮಾಜಿ ಶಾಸಕ ಪ್ರಕಾಶ್ ಅವರ ಪುತ್ರ ಸ್ವರೂಪ್ ಹಾಸನ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಪತ್ನಿ ಪರ ರೇವಣ್ಣ ಲಾಬಿ ನಡೆಸಿದರೆ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸ್ವರೂಪ್ ಪರ ಒಲವು ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಸ್ವತಃ ಹೆಚ್.ಡಿ. ದೇವೇಗೌಡರೇ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ತೀರ್ಮಾನವನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಸೋಮವಾರ ಜೆಡಿಎಸ್ ಅಭ್ಯರ್ಥಿಗಳ 2 ನೇ ಪಟ್ಟಿ ಬಿಡುಗಡೆಯಾಗಲಿದೆ. ಭವಾನಿ ರೇವಣ್ಣಗೆ ಹಾಸನ ಟಿಕೆಟ್ ನೀಡಿದ್ರೆ ಗೆದ್ದೇ ಗೆಲ್ಲಾರೆ, ದಯವಿಟ್ಟು ಅವರಿಗೆ ಟಿಕೆಟ್ ಕೊಡಿ ಎಂದು ಭವಾನಿ ರೇವಣ್ಣ ಬೆಂಬಲಿಗರು ದೇವೇಗೌಡರ ಬಳಿ ಮನವಿ ಮಾಡಿದ್ದಾರೆ.