ಸ್ವತಂತ್ರವಾಗಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ಗುರಿ: ಕುಮಾರಸ್ವಾಮಿ

ಸ್ವತಂತ್ರವಾಗಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ಗುರಿ: ಕುಮಾರಸ್ವಾಮಿ

ಬೆಂಗಳೂರು: ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದೇ ನಮ್ಮ ಗುರಿ. ಇದಕ್ಕಾಗಿ ಚುನಾವಣೆಗೆ ಒಂದು ವರ್ಷಕ್ಕೂ ಮೊದಲೇ ಅಭ್ಯರ್ಥಿಗಳನ್ನ ಘೋಷಿಸಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ ಕಚೇರಿ ಜೆ.ಪಿ. ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂಪೂರ್ಣ ಕಡಿಮೆಯಾದ ಬಳಿಕ ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಮುಂದಿನ ಜ. 15ರ ಒಳಗೆ 150 ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದರು.

ಒಂದು ವಾರ ಕಾಲ ಪಕ್ಷದ ಜಿಲ್ಲಾವಾರು ಸಂಘಟನೆ ಸಭೆ ಕರೆದಿದ್ದೇನೆ. ಮುಂದಿನ ಐದು ದಿನಗಳ ಕಾಲ ಸಂಘಟನೆ ಬಗ್ಗೆ ಚರ್ಚೆ ನಡೆಯಲಿದೆ. ಸರಣಿ ಸಭೆಯಲ್ಲಿ ತಾಲೂಕು, ಜಿಲ್ಲಾ ಪಂಚಾಯತ್‌ ಹಾಗೂ ಮುಂದಿನ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.

ರಾಷ್ಟ್ರೀಯ ಪಕ್ಷಗಳಿಗೆ ಟೀಕೆ :

ರಾಷ್ಟ್ರೀಯ ಪಕ್ಷ ಆಡಳಿತ ನಡೆಸಬೇಕಾದರೆ ದಿಲ್ಲಿಯಿಂದ ಇಲ್ಲಿಗೆ ಉಸ್ತುವಾರಿಯನ್ನು ಕಳುಹಿಸುತ್ತಾರೆ. ಅವರು ರಾಜ್ಯಕ್ಕೆ ಬರುವ ಉದ್ದೇಶವಾದರೂ ಏನು? ಕರ್ನಾಟಕ ಸಂಪದ್ಭರಿತ ರಾಜ್ಯವಾಗಿದ್ದು, ಇಲ್ಲಿನ ಸಂಪತ್ತು ಲೂಟಿ ಮಾಡಲು ಅವರು ಬರುತ್ತಾರೆ ಎಂದು ಆರೋಪಿಸಿದರು.

ಕೆಆರ್‌ಎಸ್‌ಗೆ ಪ್ರತಿಕ್ರಿಯೆ ಇಲ್ಲ :

ಕೆಆರ್‌ಎಸ್‌ ಜಲಾಶಯ ಕುರಿತು ಸಂಸದೆ ಸುಮಲತಾ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಕುಮಾರಸ್ವಾಮಿ, ಅಯ್ಯೋ.. ಅದೆಲ್ಲ ಬೇಡ ಬಿಡಿ. ಆ ಟೆಕ್ನಿಕಲ್‌ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದರು.

ಸಭೆಗೆ ಹೋಗದ ಈಶ್ವರಪ್ಪ:

ಕೇಂದ್ರ ಸಚಿವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಇಲಾಖೆಗೆ ಸಂಬಂಧಪಟ್ಟ ಸಭೆ ನಡೆಸುತ್ತಾರೆ. ಆದರೆ ಆ ಸಭೆಗೆ ಸಚಿವ ಈಶ್ವರಪ್ಪ ಹೋಗುವುದೇ ಇಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದರು. ಜಲಮಿಷನ್‌ ಯೋಜನೆ ಬಗ್ಗೆ ತಿಳಿಸಲು ಕೇಂದ್ರ ಸಚಿವರು ರಾಜ್ಯಕ್ಕೆ ಬಂದು, 99 ಲಕ್ಷ ಕುಟುಂಬಗಳಿಗೆ ನೀರು ಹರಿಸುವ ಬಗ್ಗೆ ಮಾತಾಡಿದ್ದರು. ಆ ಸಭೆಗೆ ಈಶ್ವರಪ್ಪ ಹೋಗಲಿಲ್ಲ ಎಂದರು.