ಸ್ಟಾರ್‌ ಕ್ಯಾಂಪೇನರ್‌ ಪಟ್ಟಿಯಲ್ಲಿಲ್ಲ ಯೋಗಿ ಆದಿತ್ಯನಾಥ್‌- ಕಾರಣ ತಿಳಿಯಿರಿ

ಸ್ಟಾರ್‌ ಕ್ಯಾಂಪೇನರ್‌ ಪಟ್ಟಿಯಲ್ಲಿಲ್ಲ ಯೋಗಿ ಆದಿತ್ಯನಾಥ್‌- ಕಾರಣ ತಿಳಿಯಿರಿ

ಬೆಂಗಳೂರು, ಏಪ್ರಿಲ್‌ 05: ಮೇ ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Elections 2023 ) ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಜೆಡಿಎಸ್‌ ( JDS ), ಕಾಂಗ್ರೆಸ್‌ ( Congress ) ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಆಡಳಿತಾರೂಢ ಬಿಜೆಪಿ ಮುಂದಿನ ವಾರ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಮುಖ್ಯ ಪ್ರಚಾರಕರಾಗಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ರಾಜ್ಯ ಘಟಕವು ಕನಿಷ್ಠ 20 ರ‌್ಯಾಲಿಗಳನ್ನು ಪ್ರಧಾನಿ ಮೋದಿ ಅವರಿಗಾಗಿ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಪ್ರಧಾನಿಅವರು ಮಾತನಾಡಲಿದ್ದಾರೆ.

ಮೇ 6 ರಿಂದ 8ರ ವರೆಗೂ ಮೈಸೂರಿನಲ್ಲಿ ಪ್ರಧಾನಿ ಮೊಕ್ಕಾಂ ಹೂಡಬಹುದೆಂದು ಹೇಳಲಾಗುತ್ತಿದೆ. ಕರ್ನಾಟಕ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಹಿಂದುತ್ವದ ಫೈರ್‌ ಬ್ರ್ಯಾಂಡ್‌, ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೆ ಬಿಜೆಪಿ ಈ ಬಾರಿ ಮಣೆ ಹಾಕದಿರುವುದು ಹಲವು ಶಂಕೆಗಳಿಗೆ ಕಾರಣವಾಗಿದೆ.

ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಮಣೆ ಇಲ್ಲ

ಉತ್ತರ ಪ್ರದೇಶದ ಮುಖ್ಯಮಂತ್ರಿಅವರು ಕಳೆದ ಬಾರಿಯ ಚುನಾವಣೆಯಲ್ಲಿ ಸ್ಟಾರ್‌ ಪ್ರಚಾರಕರಾಗಿದ್ದರು. ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿಯೂ ಯೋಗಿ ಆದಿತ್ಯನಾಥ್‌ ಪ್ರಮುಖ ಪ್ರಚಾರಕರಾಗಿ ಭಾಗವಹಿಸಿದ್ದರು. ಆದರೆ, ಕರ್ನಾಟಕದ ಚುನಾವಣೆಯಲ್ಲಿ ಅವರನ್ನು ಹೆಚ್ಚಾಗಿ ಬಳಸಿಕೊಳ್ಳದಿರಲು ಬಿಜೆಪಿ ನಿರ್ಧರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕರ್ನಾಟಕದಲ್ಲಿ ಹಿಂದುತ್ವದ ಅಲೆ ಇಲ್ಲ

ಉತ್ತರ ಭಾರತದ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲಿ ಹಿಂದುತ್ವದ ಅಲೆ ಇಲ್ಲವೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಕರಾವಳಿ ಪ್ರದೇಶದ ಜಿಲ್ಲೆಗಳನ್ನು ಬಿಟ್ಟರೆ, ಉಳಿದ ಜಿಲ್ಲೆಗಳಲ್ಲಿ ಹಿಂದುತ್ವವನ್ನು ಪ್ರಚಾರದ ಸರಕನ್ನಾಗಿ ಬಳಸಿಕೊಳ್ಳುವುದು ಬಿಜೆಪಿಗೆ ಲಾಭ ತಂದುಕೊಡುವುದಿಲ್ಲವೆಂದೂ ರಾಜಕೀಯ ತಜ್ಞರು ಹೇಳಿದ್ದಾರೆ.

ಮೇಲಾಗಿ, ಉತ್ತರದ ರಾಜ್ಯಗಳಲ್ಲಿ ಹಾಗೆ ಕರ್ನಾಟಕದಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಬಹಳಷ್ಟಿಲ್ಲ. ಹೀಗಾಗಿ ಯೋಗಿ ಆದಿತ್ಯನಾಥ್‌ ಅವರ ಪ್ರಚಾರದಿಂದ ಯಾವುದೇ ಪರಿಣಾಮವಾಗದು ಎಂದು ಪಕ್ಷದ ಮುಖಂಡರೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂಬ ಮಾತುಗಳು ಕೇಳಿಬಂದಿವೆ.

ಯುಪಿ ಮಾಡೆಲ್‌ಗೆ ಕರ್ನಾಟಕದಲ್ಲಿ ಇಲ್ಲ ಮನ್ನಣೆ

ಕರ್ನಾಟಕದಲ್ಲಿ ಯುಪಿ ಮಾಡೆಲ್‌ ತರುವ ಬಗ್ಗೆ ಬಿಜೆಪಿ ಈ ಹಿಂದೆ ಮಾತನಾಡಿತ್ತು. ಆದರೆ, ಈಗ ಅದರ ಬಗ್ಗೆ ಯಾರು ಸೊಲ್ಲೆತ್ತುತ್ತಿಲ್ಲ. ಇದಕ್ಕೆ ಕಾರಣ, ಕರ್ನಾಟಕವನ್ನು ಹೋಲಿಸಿಕೊಂಡರೆ, ಯುಪಿ ಹಿಂದುಳಿದ ರಾಜ್ಯವಾಗಿದೆ. ಇದನ್ನೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಪ್ರಚಾರದ ಸರಕನ್ನಾಗಿ ಮಾಡಿಕೊಂಡು ವಾಗ್ದಾಳಿ ನಡೆಸಿದ್ದರು.

ಜಿಡಿಪಿ, ಲಿಂಗಾನುಪಾತ, ಹಸಿವಿನ ಸೂಚ್ಯಂಕ, ನಿರುದ್ಯೋಗದಂತಹ ವಿಚಾರಗಳಲ್ಲಿ ಉತ್ತರ ಪ್ರದೇಶಕ್ಕಿಂತ ಕರ್ನಾಟಕವು ಮುಂದಿದೆ. ಹೀಗಾಗಿ, ಕರ್ನಾಟಕದಲ್ಲಿ ಯುಪಿ ಮಾಡೆಲ್‌ಗೆ ಅಷ್ಟೊಂದು ಮನ್ನಣೆ ದೊರೆಯುವುದಿಲ್ಲವೆಂಬ ಮಾತುಗಳೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್‌ ಅವರನ್ನು ಕರಾವಳಿಗಷ್ಟೇ ಸೀಮಿತಗೊಳಿಸುವ ಬಗ್ಗೆ ಬಿಜೆಪಿ ನಿರ್ಧರಿಸಿರಬಹುದು ಎಂದು ಹೇಳಲಾಗುತ್ತಿದೆ.

ಯೋಗಿ ಆದಿತ್ಯನಾಥ್‌ ಅವರು ಮೇ 6 ಅಥವಾ 7 ರಂದು ಕರಾವಳಿಗೆ ಬರುವ ಸಾಧ್ಯತೆ ಇದೆ. ಉಡುಪಿ ಹಾಗೂ ಮಂಗಳೂರಿನಲ್ಲಿ ಯೋಗಿ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಬಹುದು ಎಂದು ಹೇಳಲಾಗುತ್ತಿದೆ. ಕರಾವಳಿ ಪ್ರದೇಶಗಳಿಗೆ ಅಷ್ಟೇ ಯೋಗಿ ಪ್ರಚಾರ ಸೀಮಿತಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.