ಸಿದ್ದರಾಮಯ್ಯ ಸೋಲುವ ಭೀತಿಯಿಂದಲೇ ಮತ್ತೊಂದು ಕ್ಷೇತ್ರ ಹುಡುಕುತ್ತಿದ್ದಾರೆ; ಪ್ರಹ್ಲಾದ್‌ ಜೋಶಿ

ಸಿದ್ದರಾಮಯ್ಯ ಸೋಲುವ ಭೀತಿಯಿಂದಲೇ ಮತ್ತೊಂದು ಕ್ಷೇತ್ರ ಹುಡುಕುತ್ತಿದ್ದಾರೆ; ಪ್ರಹ್ಲಾದ್‌ ಜೋಶಿ

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಬಿಜೆಪಿ ಶಾಸಕರಿಗೆ ಕರೆ ಮಾಡಿ ಕಾಂಗ್ರೆಸ್ ಗೆ ಆಹ್ವಾನ ನೀಡುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಭ್ರಮನಿರಸನಗೊಂಡಿದ್ದಾರೆ ಎಂದರು ಕಾಂಗ್ರೆಸ್‌ ವಿರುದ್ಧ ಟೀಕೆ ಮಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಅಂತಿದ್ದಾರೆ. ಅಪ್ಪನಿಗಾಗಿ ಮಗ ದೊಡ್ಡ ತ್ಯಾಗ ಮಾಡಿದ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ.ವರುಣದಲ್ಲಿ ಸೋಲುವ ಭೀತಿಯಿಂದಲೇ ಸಿದ್ದರಾಮಯ್ಯ ಮತ್ತೊಂದು ಕ್ಷೇತ್ರ ಹುಡುಕಾಟದಲ್ಲಿ ತೊಡಗಿದ್ದಾರೆ. ಕೋಲಾರ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ 224 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿ ಎಂದು ವ್ಯಂಗ್ಯವಾಡಿದರು.

ಇನ್ನು ಏಪ್ರಿಲ್‌ 6 ಮತ್ತು 7 ರಂದು ಬಿಜೆಪಿ ಅಭ್ಯರ್ಥಿ ಪಟ್ಟಿ ಘೋಷಣೆ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹವಾಗುತ್ತದೆ. ಶೀಘ್ರದಲ್ಲೇ ಅಭ್ಯರ್ಥಿ ಪಟ್ಟಿ ರಿಲೀಸ್‌ ಆಗಲಿದೆ ಎಂದರು.ಗ್ಯಾರಂಟಿ ಕಾರ್ಡ್‌ ತೋರಿಸಿ ಕಾಂಗ್ರೆಸ್‌ ಜನರಿಗೆ ಸುಳ್ಳು ಆಶ್ವಾಸನೆ ನೀಡುತ್ತಿದೆ. ಕಾಂಗ್ರೆಸ್‌ ನ ಸುಳ್ಳಿನ ಆಶ್ವಾಸನೆಗಳನ್ನು ಜನ ನಂಬುವುದಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲುವುದು ನಿಶ್ಚಿತವಾಗಿದೆ. ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.