ಸಿಎಂ ಬದಲಾವಣೆ ಮಾತಿಗೆ ವರಿಷ್ಠರು ಕಡಿವಾಣ ಹಾಕಲಿ: ಸಂಸದ ಜಿಗಜಿಣಗಿ

ಸಿಎಂ ಬದಲಾವಣೆ ಮಾತಿಗೆ ವರಿಷ್ಠರು ಕಡಿವಾಣ ಹಾಕಲಿ: ಸಂಸದ ಜಿಗಜಿಣಗಿ

ವಿಜಯಪುರ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದ ಮುಖಂಡರು ನೀಡುತ್ತಿರುವ ಹೇಳಿಕೆಗಳು ರಾಜ್ಯದ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ಇಂಥ ಅಪಸ್ವರದ ಹೇಳಿಕೆ ಕುರಿತು ಪಕ್ಷದ ವರಿಷ್ಠರು ಕಡಿವಾಣ ಹಾಕುವಂತೆ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಸ್ಥಾನದಿಂದ ಬಸವರಾಜ ಬೊಮ್ಮಾಯಿ ಬದಲಾವಣೆ ಮಾಡುವ ಕುರಿತು ಅಪಸ್ವರದ ಮಾತು ಕೇಳಿ ಬರುತ್ತಿವೆ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಈಗಿನ್ನೂ ನೂರು ದಿನವಷ್ಟೇ ಕಳೆದಿದ್ದರೂ ಉತ್ತಮ ಆಡಳಿತ ನಿರ್ವಹಣೆ. ಇದೆ. ಇಂಥ ಸ್ಥಿತಿಯಲ್ಲಿ ಬಹಿರಂಗವಾಗಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಸಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದ್ದು, ತಪ್ಪು ಸಂದೇಶ ರವಾನಿಸುತ್ತಿದೆ ಎಂದು ಅತೃಪ್ತಿ ಹೊರ ಹಾಕಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಾಗಲೆಲ್ಲ ಮುಖ್ಯಮಂತ್ರಿ ಬದಲಾವಣೆ ವಿಷಯ ಚರ್ಚೆಗೆ ಬರುತ್ತದೆ. ಹಿಂದಿನ ಅವಧಿಯಲ್ಲಿ ಮೂರು ಮುಖ್ಯಮಂತ್ರಿ ಕಂಡಿದ್ದು, ಈ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಎರಡನೆಯವರು. ಬೊಮ್ಮಾಯಿ ಅವರನ್ನು ಬದಲಿಸಿದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುವದು ಖಚಿತ ಎಂದವರು ಎಚ್ಚರಿಸಿದ್ದಾರೆ.

ವರಿಷ್ಠರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇಂಥ ಹೇಳಿಕೆಗಳನ್ನು ಕಡೆಗಣಿಸಿದರೆ ಅಧಿಕಾರ ಸಿಕ್ಕಾಗ ಆಡಳಿತ ನಡೆಸಲು ಬಾರದ ಬಿಜೆಪಿ ಪಕ್ಷದಲ್ಲಿ ಯಾವುದೂ ಸರಿ ಇಲ್ಲ ಎಂಬ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನಾನು ಸೇರಿದಂತೆ 17 ವರ್ಷಗಳ ಹಿಂದೆಯೇ ಜನತಾ ಪರಿವಾರದಿಂದ ಅನೇಕ ನಾಯಕರು ಬಿಜೆಪಿ ಸೇರಿದ್ದೇವೆ. ವಲಸಿಗರೆಂಬ ಕಾರಣಕ್ಕೆ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾತನಾಡುವುದು ತಪ್ಪು. ಅದು ಪಕ್ಷದ ವರಿಷ್ಠರಿಗೂ ಗೊತ್ತು. ಒಂದೊಮ್ಮೆ ಬೊಮ್ಮಾಯಿ ಅವರನ್ನು ಬದಲಿಸಿದರೆ ರಾಜ್ಯದಲ್ಲಿ ಭಾರಿ ಅಸಮಾಧಾನಕ್ಕೂ ಕಾರಣವಾಗಿ, ಪಕ್ಷದ ಭವಿಷ್ಯಕ್ಕೂ ಮಾರಕ ಪರಿಣಾಮ ಬೀರಲಿದೆ ಎಂದು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.