ಸಾಲು ಗಿಡ ನೆಡುವ ಮೂಲಕ ವನಮೋಹತ್ಸವ ಆಚರಣೆ

ಉಡುಪಿ, ಜು.17: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್, ಅರಣ್ಯ ಇಲಾಖೆ, ಮತ್ತು ಚೌಡೇಶ್ವರಿ ಫ್ರೆಂಡ್ಸ್ ಶಾಂತಿನಗರ ಇವುಗಳ ಸಹಭಾಗಿತ್ವದಲ್ಲಿ ಮಣಿಪಾಲದ ಶಾಂತಿನಗರದ ರಸ್ತೆಯ ಸನಿಹಗಳಲ್ಲಿ ಶನಿವಾರ ಸಾಲು ಗಿಡಗಳನ್ನು ನೆಡುವ ಮೂಲಕ ವನಮೋಹತ್ಸವ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಪವಲಯ ಅರಣ್ಯಾಧಿಕಾರಿ ಸುರೇಶ್ ಜಿ. ಮಾತನಾಡಿ, ಭಾರತ ದೇಶದಲ್ಲಿರುವ ಜನಸಂಖ್ಯೆ ಅನುಗುಣ ವಾಗಿ ಶೇ.33 ರಷ್ಟು ಅರಣ್ಯವು ಉಸಿರಾಡಲು ಬೇಕಾಗಿದೆ. ಆದರೆ ಈಗ ದೇಶದಲ್ಲಿ ಶೇ.17 ರಷ್ಟು ಅರಣ್ಯ ಮಾತ್ರ ಉಳಿದುಕೊಂಡಿದೆ. ಹೀಗೆ ಪರಿಸರ ನಾಶ ಮುಂದು ವರೆದರೆ, ಮುಂದಿನ ದಿನಗಳಲ್ಲಿ ಆಮ್ಲಜನಕದ ಕೊರತೆ ಎದುರಾಗಿ, ಉಸಿರು ಗಟ್ಟುವ ವಾತಾವರಣ ನಿರ್ಮಾಣ ವಾಗಬಹುದು. ಹಾಗಾಗಿ ಗಿಡಗಳು ನೆಡುವ ಮತ್ತು ಪರಿಸರ ರಕ್ಷಿಸುವ ಹೊಣೆಗಾರಿಕೆ ನಮ್ಮದಾಗಬೇಕೆಂದು ಹೇಳಿದರು.
ಮಲಬಾರ್ ಗೋಲ್ಡ್ ನ ಜನಸಂಪರ್ಕ ಅಧಿಕಾರಿ ರಾಘವೇಂದ್ರ ನಾಯಕ್ ಅಜೆಕಾರ್ ಮಾತನಾಡಿದರು. ಅರಣ್ಯ ರಕ್ಷಕರಾದ ದೇವಾರಜ್ ಪಾಣ, ಕೇಶವ ಪೂಜಾರಿ, ಚೌಡೇಶ್ವರಿ ಫ್ರೆಂಡ್ಸ್ ಅಧ್ಯಕ್ಷ ವಿನಯ ಕುಂದರ್ ಮತ್ತು ರಾಘವೇಂದ್ರ ರಾವ್, ರತ್ನಾಕರ್ ಶೆಟ್ಟಿ, ಸತೀಶ್ ಪೂಜಾರಿ, ಸುಧಾಕರ್ ಶೆಟ್ಟಿ, ಮೋಹನ್ ಶಾಂತಿನಗರ, ನಾಗರಿಕ ಸಮಿತಿಯ ಕೃಷ್ಣಮೂರ್ತಿ ಸಾಮಗ, ವಿನೋದ ಸಾಮಗ, ಯುಕ್ತ ಸಾಮಗ, ಕೆ. ಬಾಲ ಗಂಗಾಧರ್ ರಾವ್, ಕಮಲಾಕ್ಷ ಪ್ರಭು, ತಾರಾನಾಥ್ ಮೇಸ್ತ ಶಿರೂರು ಉಪಸ್ಥಿತರಿದ್ದರು.
ನಾಗರಿಕ ಸಮಿತಿಯ ಸಂಚಾಲಕ ಒಳಕಾಡು ನಿತ್ಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಸರವಾದಿ ವಿನಯಚಂದ್ರ ಸಾಸ್ತಾನ ವಂದಿಸಿದರು.