ಸಚಿವ ಅಶ್ವತ್ಥನಾರಾಯಣ ವಿರುದ್ಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಗುಡುಗು

ಸಚಿವ ಅಶ್ವತ್ಥನಾರಾಯಣ ವಿರುದ್ಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಗುಡುಗು

ಬೆಂಗಳೂರು: ಬೊಮ್ಮಾಯಿ ಅವರು ಪದೇ ಪದೆ ಹೇಳುತ್ತಿರುವಂತೆ ಕರ್ನಾಟಕ ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿ ಜಾರಿ ಮಾಡಲಾಗುತ್ತಿದೆ. ಉತ್ತರ ಪ್ರದೇಶದ ಮಾದರಿಯಲ್ಲೇ ಯಾರೂ ಸರ್ಕಾರದ ವಿರುದ್ಧ ಮಾತನಾಡಬಾರದು, ಪ್ರಶ್ನೆ ಕೇಳಬಾರದು, ಪ್ರತಿಭಟನೆ ಮಾಡಬಾರದು ಎಂಬ ದಬ್ಬಾಳಿಕೆ ಮಾಡುತ್ತಿದ್ದಾರೆ.

ವಿರೋಧ ಪಕ್ಷವಾಗಲಿ, ಸಾರ್ವಜನಿಕರಾಗಲಿ, ಸರ್ಕಾರದ ವಿರುದ್ದ ಮಾತನಾಡಿದರೆ ಪೊಲೀಸರ ಮೂಲಕ ದೌರ್ಜನ್ಯ, ಪ್ರಕರಣ ದಾಖಲಿಸಲಾಗುವುದು ಎಂಬ ಸಂದೇಶವನ್ನು ಈ ಸರ್ಕಾರ ಅಶ್ವತ್ಥ್ ನಾರಾಯಣ ಅವರ ಮೂಲಕ ಕಳುಹಿಸುತ್ತಿದ್ದಾರೆ ಎಂದು ಸಚಿವ ಅಶ್ವತ್ಥನಾರಾಯಣ ವಿರುದ್ಧ ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ( Priyank Kharge ) ಗುಡುಗಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಮಲ್ಲೇಶ್ವರಂನ 60-70 ಜನರ ವಿರುದ್ದ ಈಗ ಪ್ರಕರಣ ದಾಖಲಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವರು ಮಾಡಿರುವ ತಪ್ಪು ಏನೆಂದರೆ, ಸ್ಯಾಂಕಿ ಮೇಲ್ಸೆತುವೆ ಯೋಜನೆ ವಿರೋಧಿಸಿ ಪರಿಸರ ಉಳಿಸಲು ಹೋರಾಟ ಮಾಡಿರುವುದು. ಈ ಸಾರ್ವಜನಿಕರು 22 ಸಾವಿರ ಜನ ಸಹಿ ಹಾಕಿರುವ ಅರ್ಜಿಯಲ್ಲಿ ಸ್ಯಾಂಕಿ ಮೇಲ್ಸೆತುವೆ ರಸ್ತೆ ಅಗಲೀಕರಣ ಬೇಡ ಎಂದು ಹೇಳಿದ್ದಾರೆ. 2 ಸಾವಿರ ಶಾಲಾ ಮಕ್ಕಳು ಬೊಮ್ಮಾಯಿ ಅಂಕಲ್ ಗೆ ಪತ್ರ ಬರೆದು ಈ ಯೋಜನೆಯಿಂದ ಪರಿಸರ ನಾಶವಾಗಲಿದೆ, ನಮ್ಮ ಶಾಲೆಗೆ ತೊಂದರೆಯಾಗಲಿದೆ ತಮ್ಮ ಮನವಿ ಸಲ್ಲಿಸಿದ್ದಾರೆ. ಆದರೂ ಮುಖ್ಯಮಂತ್ರಿಗಳು ಇವರ ಮನವಿಗೆ ಆದರೂ ಕಿವಿಗೊಟ್ಟಿಲ್ಲ. ಈ ಸಾರ್ವಜನಿಕರು ಸರ್ಕಾರಕ್ಕೆ 5 ಪ್ರಶ್ನೆ ಕೇಳಿದ್ದಾರೆ. ಅವುಗಳೆಂದರೆ

• ಈ ಯೋಜನೆ ಉತ್ತಮ ಹಾಗೂ ಜನಪರವಾಗಿದ್ದರೆ ಈ ಯೋಜನೆ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿಲ್ಲ ಯಾಕೆ?

• 2020ರಲ್ಲಿ ಸರ್ಕಾರ ಮಾಡಿರುವ ಕಾಂಪ್ರಹೆನ್ಸ್ ಮೊಬಿಲಿಟಿ ಪ್ಲಾನ್ ನೀತಿಗೆ ತ್ತವಿರುದ್ಧವಾಗಿದೆಯಾ? ಬಿಎಂಎಲ್ ಟಿಎ ಗೆ (ಭೂಮಿ ಹಸ್ತಾಂತರ ಪ್ರಾಧಿಕಾರ)ಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿ ಅದರ ಅನುಮತಿ ಸಿಕ್ಕಿದೆಯಾ? ಇದರ ಮುಖ್ಯಸ್ಥರು ಯಾರೆಂದರೆ ಮುಖ್ಯಮಂತ್ರಿಗಳು. ಇದಕ್ಕೆ ಸರಿಯಾದ ಸಮಿತಿಯೇ ಇಲ್ಲ.

• ಕೆರೆ ಮೇಲೆ ಮೇಲ್ಸೇತುವೆ ನಿರ್ಮಾಣದಿಂದ ಪರಿಸರದ ಮೇಲೆ ಆಗುವ ಪರಿಣಾಮದ ಕುರಿತು ಅದ್ಯಯನ ಮಾಡಬೇಕು. ಅದರ ವರದಿ ಎಲ್ಲಿದೆ?

• ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶ ಪಾಲನೆಯಾಗಿದೆಯಾ? ನ್ಯಾಯಾಧಿಕರಣದ ಆದಶದ ಪ್ರಕಾರ ಕೆರೆ ಸುತ್ತ 30 ಮೀಟರ್ ಬಫರ್ ಜೋನ್ ನಿರ್ವಹಣೆ ಮಾಡಬೇಕು. ಇದರ ಬಗ್ಗೆ ಸರ್ಕಾರ ಸಾರ್ವಜನಿಕ ದಾಖಲೆಯನ್ನು ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಯಾರಿಗೂ ಮಾಹಿತಿ ನೀಡುತ್ತಿಲ್ಲ.

• ಇಷ್ಟು ದೊಡ್ಡ ಯೋಜನೆಗೆ ಡಿಪಿಆರ್ ಎಲ್ಲಿದೆ? ಈ ಬಗ್ಗೆ ತಜ್ಞರ ಅಭಿಪ್ರಾಯಕೇಳಿಲ್ಲ ಯಾಕೆ? ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ.

ಅಶ್ವತ್ಥ್ ನಾರಾಯಣ ಅವರ ಯೋಜನೆ ಹೇಗಿದೆ ಎಂದರೆ ಅಸ್ಥಿತ್ವಕ್ಕೆ ತರಲು ಸಾಧ್ಯವಾಗದ ಯೋಜನೆ ಸಾಧ್ಯ ಮಾಡುವ ಪ್ರಯತ್ನ ಮಾಡುತ್ತಾರೆ. ಅದಕ್ಕೆ ಉದಾಹರಣೆ ಉರಿಗೌಡ ನಂಜೇಗೌಡ ಅವರ ಕಥೆ. ಅದೇ ರೀತಿ ಅಸ್ತಿತ್ವಕ್ಕೆ ತರಲು ಸಾಧ್ಯವಾಗದ ಮೇಲ್ಸೇತುವೆ ಯೋಜನೆ ಜಾರಿಗೆ ತರಲು ಮುಂದಾಗುತ್ತಾರೆ. ಕೇವಲ 40% ಕಮಿಷನ್ ಹೊಡೆಯಲು ಈ ಯೋಜನೆಗೆ ಮುಂದಾಗಿದ್ದಾರೆ ಎಂದರು.

ಈ ಯೋಜನೆ ಬಗ್ಗೆ ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳು ಪ್ರಶ್ನಿಸಿದಾಗ ಬಿಎಂಎಲ್ ಟಿಎಗೆ ಪತ್ರ ಬರೆದರು. ನಂತರ ಈ ಸಮಿತಿ ರಚನೆಯಾಗಿಲ್ಲ ಹೀಗಾಗಿ ಇದನ್ನು ತಡೆ ಹಿಡಿಯಲಾಗಿದೆ ಎಂದು ಮುಚ್ಚಿಹಾಕಲು ಪ್ರಯತ್ನಿಸಿದರು.

ಆದರೆ ಈ ಭಾಗದಲ್ಲಿ ಪರಿಸರ ಸಂರಕ್ಷಣೆಗಾಗಿ ಕೆರೆ ಸುತ್ತ ಫೆ.19ರಂದು ಮಕ್ಕಳು, ವೃದ್ಧರು, ಪರಿಸರ ಬಗ್ಗೆ ಕಾಳಜಿ ಇರುವ ಜಾಗೃತ ನಾಗರೀಕರು ಹೋರಾಟ ಮಾಡಿದರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗಿರುವುದು ಅಪರಾಧವಂತೆ. ಯಾವುದೇ ದೂರು ಇಲ್ಲದಿದ್ದರೂ ಸುಮೋಟೋ ಪ್ರಕರಣ ದಾಖಲಿಸಿ ಕೇಸ್ ಹಾಕಲಾಗಿದೆ ಎಂದರು.

ಈ ಸರ್ಕಾರದ ಉದ್ದೇಶವೇನು? ಇವರು ಏನೇ ಮಾಡಿದರೂ ಜನರು ಕೇಳಬೇಕಾ? ಈ ಸರ್ಕಾರ ಅಮಾಯಕರ ಮೇಲೆ ದರ್ಪ ತೋರಿಸುತ್ತದೆಯೇ? ಇದೇ ದರ್ಪವನ್ನು ಲಂಚ ಪಡೆದು ಸಿಕ್ಕಿ ಬಿದ್ದಿರುವ ಮಾಡಾಳ್ ಅವರ ವಿರುದ್ಧ ಯಾಕೆ ತೋರುವುದಿಲ್ಲ. ಸಾರ್ವಜನಿಕರ ಹಿತಾಸಕ್ತಿ ಪರವಾಗಿರುವವರ ವಿರುದ್ಧ ಕೇಸ್ ಹಾಕುತ್ತಿದ್ದೀರಾ? ಇದು ಯೋಗಿ ಉತ್ತರ ಪ್ರದೇಶವಲ್ಲ. ನ್ಯಾಯದ ಪರವಾಗಿ ಹೋರಾಡುವ ಕನ್ನಡಿಗರ ಕರ್ನಾಟಕ. ಸರ್ಕಾರ ಜನರನ್ನು ಹೆದರಿಸುವುದನ್ನು ನಿಲ್ಲಿಸಲಿ. ನಾವು ಯಾವುದೇ ತಪ್ಪು ಮಾಡುತ್ತಿಲ್ಲ. ತಪ್ಪು ಮಾಡಿದವರನ್ನು ರಕ್ಷಣೆ ಮಾಡಿ, ಜನ ಪರವಾಗಿ ನಿಲ್ಲುವವರ ವಿರುದ್ಧ ನಿಲ್ಲುತ್ತೀರಾ? ಇದಕ್ಕೆ ಹೆದರಿ ನಾವು ಹಿಂದೆ ಸರಿಯುವುದಿಲ್ಲ. ನಾವು ಸದಾ ಬೆಂಗಳೂರು ಜನರ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿದರು.

ಚುನಾವಣೆಗೆ 1 ತಿಂಗಳು ಉಳಿದಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಭ್ರಷ್ಟ ಯೋಜನೆ ಹಾಗೂ ಸುಳ್ಳು ಕೇಸ್ ವಜಾ ಮಾಡುತ್ತೇವೆ. ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿರುವ ಪೊಲೀಸ್ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ನಮ್ಮ ಸರ್ಕಾರ ಕಾನೂನು ರೀತಿಯ ಕ್ರಮ ಕೈಗೊಳ್ಳಲಿದೆ. ಈ ಪೊಲೀಸರು ಸರ್ಕಾರದಿಂದ ಸಂಬಳ ಪಡೆಯುತ್ತಿದ್ದಾರಾ ಅಥವಾ ಬಿಜೆಪಿ ಕಚೇರಿಯಿಂದ ಸಂಬಳ ಪಡೆಯುತ್ತಿದ್ದಾರಾ? ಸರ್ಕಾರದ ಈ ಕ್ರಮವನ್ನು ಖಂಡಿಸಿದರು.

ಪದೇ ಪದೆ ಅಶ್ವತ್ಥ್ ನಾರಾಯಣ ಅವರ ವಿರುದ್ಧ ಇಂತಹ ಆರೋಪ ಕೇಳಿಬರುತ್ತಿದ್ದು, ಕ್ಷೇತ್ರದಲ್ಲಿ ಪಕ್ಷದ ವತಿಯಿಂದ ಹೋರಾಟ ಮಾಡುತ್ತೀರಾ ಎಂಬ ಮಾಧ್ಯಮದ ಪ್ರಶ್ನೆಗ ತ್ತರಿಸಿದ ಪ್ರಿಯಾಂಕ್ ಖರ್ಗೆ ಅವರು, 'ಅನೂಪ್ ಐಯ್ಯಾಂಗರ್ ಅವರು ಪಕ್ಷದ ಅಬ್ಯರ್ಥಿಯಾಗಿದ್ದು, ಅವರು ಅಶ್ವತ್ಥ್ ನಾರಾಯಣ ಅವರ ದುರಾಡಳಿತ, ಭ್ರಷ್ಟ ಯೋಜನೆ ಬಯಲಿಗೆಳೆದು ಅದರ ವಿರುದ್ಧ ಹೋರಾಟ ಮಾಡಲಿದ್ದಾರೆ' ಎಂದು ತಿಳಿಸಿದರು.

ಇದೇ ಪ್ರಶ್ನೆಗೆ ಉತ್ತರಿಸಿದ ಅನೂಪ್ ಅಯ್ಯಾಂಗಾರ್ ಅವರು, 'ಇಂತಹ ಬೆದರಿಕೆ ಇದೇ ಮೊದಲಲ್ಲ ಅನೇಕ ವಿಚಾರವಾಗಿ ಹೆದರಿಸುತ್ತಿದ್ದಾರೆ. ಇತ್ತೀಚೆಗೆ ಸಾರ್ವಜನಿಕ ಸಭೆಯಲ್ಲಿ ಅಸ್ವತ್ಥ್ ನಾರಾಯಣ ಅವರು ಮೇ13ರ ನಂತರ ನಾನು ಯಾರು ಎಂದು ತೋರಿಸುತ್ತೇನೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಹಾಗಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮಾಡುವುದೇಕೆ?' ಎಂದು ಪ್ರತಿಕ್ರಿಯಿಸಿದರು.