ವಿಜೃಂಭಣೆಯಿಂದ ನಡೆದ ಐತಿಹಾಸಿಕ ಮೇಲುಕೋಟೆ ವೈರಮುಡಿ ಉತ್ಸವ, ಕಣ್ ತುಂಬಿಕೊಂಡ ಲಕ್ಷಾಂತರ ಭಕ್ತಗಣ

ವಿಜೃಂಭಣೆಯಿಂದ ನಡೆದ ಐತಿಹಾಸಿಕ ಮೇಲುಕೋಟೆ ವೈರಮುಡಿ ಉತ್ಸವ, ಕಣ್ ತುಂಬಿಕೊಂಡ ಲಕ್ಷಾಂತರ ಭಕ್ತಗಣ

ಮಂಡ್ಯ : ವಿಶ್ವವಿಖ್ಯಾತ, ಐತಿಹಾಸಿಕ ಮೇಲುಕೋಟೆ ಕ್ಷೇತ್ರದ ಚೆಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವ ಶನಿವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ವಜ್ರಖಚಿತ ವೈರಮುಡಿ ಧರಿಸಿದ್ದ ಚೆಲುವನಾರಾಯಣಸ್ವಾಮಿಯನ್ನು ಕಣ್ತುಂಬಿಕೊಂಡ ಭಕ್ತರು ಗೋವಿಂದ, ಗೋವಿಂದ ಎಂಬ ಜಯಘೋಷಗಳನ್ನು ಮೊಳಗಿಸಿದರು.

ಗಂಡ-ಭೇರುಂಡ ಸ್ವರೂಪಿ ಚಂದ್ರಪ್ರಭೆ ಪ್ರಭಾವಳಿಯ ಮಧ್ಯದಲ್ಲಿ ಅಲಂಕಾರ ಸ್ವರೂಪಿಯಾಗಿದ್ದ ಸ್ವಾಮಿಯ ಉತ್ಸವ ದೇವಾಲಯದಿಂದ ಹೊರ ಬರುತ್ತಿದ್ದಂತೆ ಭಕ್ತರು ಸಂಭ್ರಮಿಸಿದರು.

ರಾಮಾನುಜಾಚಾರ್ಯರ ಸನ್ನಿಧಿಯಲ್ಲಿ ಪ್ರಥಮ ಪೂಜೆ ಸಲ್ಲಿಸಿದ ನಂತರ ರಾತ್ರಿ 8.30ಕ್ಕೆ ವೈರಮುಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ಸವ ಸಾಗುವ ರಾಜಬೀದಿಯನ್ನು ತಳಿರು-ತೋರಣ, ದೀಪಾಲಂಕಾರದಿಂದ ಶೃಂಗರಿಸಲಾಗಿತ್ತು. ಬೀದಿಯ ಎರಡೂ ಬದಿಯಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದರು. ರಾಜ್ಯ ಮಾತ್ರವಲ್ಲದೇ ಪಕ್ಕದ ತಮಿಳುನಾಡು, ಆಂಧ್ರ ಪ್ರದೇಶ, ಕೇರಳದಿಂದಲೂ ಸಹಸ್ರಾರು ಭಕ್ತಾದಿಗಳು ಆಗಮಿಸಿದ್ದರು. ಮೇಲುಕೋಟೆಯ ವಸತಿ ಗೃಹಗಳು, ಛತ್ರಗಳು ಭಕ್ತರಿಂದ ಕಿಕ್ಕಿರಿದು ತುಂಬಿದ್ದವು.

ಇದಕ್ಕೂ ಮುನ್ನ, ಜಿಲ್ಲಾ ಖಜಾನೆ ಕಚೇರಿಯಲ್ಲಿದ್ದ ವೈರಮುಡಿ ಹಾಗೂ ರಾಜಮುಡಿ ತಿರುವಾಭರಣ ಪೆಟ್ಟಿಗೆಗೆ ಬೆಳಿಗ್ಗೆ ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ, ಎಡಿಸಿ ಹೆಚ್.ಎಲ್. ನಾಗರಾಜ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಅವರು ಪೂಜೆ ಸಲ್ಲಿಸುವ ಮೂಲಕ ಹೊರ ತೆಗೆದರು. ನಂತರ ಮಂಡ್ಯ ನಗರದ ಶ್ರೀ ಲಕ್ಷ್ಮೀ ಜನಾರ್ಧನ ದೇವಾಲಯದಲ್ಲಿ ಆಭರಣ ಪೆಟ್ಟಿಗೆಗೆ ಪ್ರಥಮ ಪೂಜೆ ನೆರವೇರಿತು. ವಿಶೇಷ ವಾಹನದಲ್ಲಿ ಬಿಗಿ ಪೊಲೀಸ್‌ ಭದ್ರತೆಯೊಂದಿಗೆ ಮೇಲುಕೋಟೆಗೆ ಮೆರವಣಿಗೆ ಮೂಲಕ ಆಭರಣಗಳನ್ನು ಕೊಂಡೊಯ್ಯಲಾಯಿತು.

ನಂತರ ದೇವಾಲಯದ ಆವರಣದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಆಭರಣ ಪೆಟ್ಟಿಗೆ ತೆರೆಯಲಾಯಿತು. ದೇವಾಲಯದ ಸ್ಥಾನಿಕರು ಆಭರಣ ಜೋಡಣೆ (ಪರ್ಕಾವಣೆ) ಪೂರ್ಣಗೊಳಿಸಿ ಕಿರೀಟ ಸಿದ್ಧಗೊಳಿಸಿದರು. ಮಹಾ ಮಂಗಳಾರತಿಯೊಂದಿಗೆ ಚೆಲುವನಾರಾಯಣ ಸ್ವಾಮಿ ಉತ್ಸವ ಮೂರ್ತಿಯನ್ನು ಮುಡಿಗೇರಿಸಲಾಯಿತು. ವೈರಮುಡಿ ಉತ್ಸವ ಬೆಳಗಿನ ಜಾವ 3 ಗಂಟೆಯವರೆಗೂ ನಡೆಯಿತು.

ವರದಿ : ಗಿರೀಶ್ ರಾಜ್, ಮಂಡ್ಯ