ಶಾಸಕ ಸ್ಥಾನಕ್ಕೆ ಗುಬ್ಬಿ ಶ್ರೀನಿವಾಸ್ ರಾಜೀನಾಮೆ

ಗುಬ್ಬಿ, ಮಾರ್ಚ್ 27: ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೊದಲು ಗುಬ್ಬಿ ಶಾಸಕ ಶ್ರೀನಿವಾಸ್ ಅವರನ್ನು ಜೆಡಿಎಸ್ನಿಂದ ಉಚ್ಛಾಟನೆ ಮಾಡಲಾಗಿತ್ತು.
ವಿಧಾನಸಭಾಧ್ಯರಿಗೆ ಪತ್ರ ಬರೆದಿರುವ ಶಾಸಕ ಗುಬ್ಬಿ ಶ್ರೀನಿವಾಸ್ ಅವರು ನನ್ನ ಸ್ವಇಚ್ಚೆಯಂತೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಜೆಡಿಎಸ್ ಹಾಗೂ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ತಾವು ಪಕ್ಷ ತೊರೆಯುವುದಾಗಿಯೂ ಹೇಳಿಕೆ ನೀಡಿದ್ದ ಅವರು ಈಗ ರಾಜೀನಾಮೆ ನೀಡುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಗುಬ್ಬಿ ಶ್ರೀನಿವಾಸ್ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೆರಿ ಅಲ್ಲಿಂದ ಸ್ಫರ್ಧೆ ಮಾಡಲಿದ್ದಾರೆ ಎನ್ನಲಾಗಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಮಾತನಾಡಿರುವ ಅವರು ನನ್ನ ರಾಜೀನಾಮೆ ಅಂಗೀಕಾರ ಆದ ಬಳಿಕ ಕಾಂಗ್ರೆಸ್ ಸೇರುತ್ತೇನೆ. ಮಾಜಿ ಪ್ರಧಾನಿಗಳಾದ ಎಚ್ಡಿ ದೇವೇಗೌಡ ಅವರು ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ನಾನು ದೇವೇಗೌಡರು ಹಾಗೂ ಕುಮಾಸ್ವಾಮಿ ನಾಯಕತ್ವ ಎರಡಲ್ಲು ಕೆಲಸ ಮಾಡಿದ್ದೇನೆ. ನನಗೆ ಎಚ್ಡಿ ದೇವೇಗೌಡರಿಂದ ಹೆಚ್ಚಿನ ಪ್ರೋತ್ಸಾಹ, ಬೆಂಬಲ ಸಿಕ್ಕಿದೆ. ಕುಮಾರಸ್ವಾಮಿ ಅವರು ಕೂಡ ನನ್ನನ್ನು ತಮ್ಮನಂತೆ ನೋಡಿಕೊಂಡಿದ್ದಾರೆ.
ಅದ್ಯಾವ ಕಾರಣಕ್ಕೆ ಜೆಡಿಎಸ್ ಪಕ್ಷದಿಂದ ನನ್ನನ್ನು ಹೊರ ಹಾಕಿದ್ದಾರೋ ಗೊತ್ತಿಲ್ಲ. ಆದರೂ ಇವತ್ತು ನನಗೆ ನೋವಾಗಿದೆ. ಹೃದಯ ಭಾರವಾಗಿದೆ. ಹಾಗಾಗಿ ನೋವಿನಿಂದಲೇ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು. 2021ರ ಅಕ್ಟೋಬರ್ನಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಅನ್ಯ ಅಭ್ಯರ್ಥಿ ಘೋಷಣೆ ಮಾಡಿದ್ದರು. ಅಂದಿನಿಂದ ನನ್ನ ಮತ್ತು ಎಚ್ಡಿ ಕುಮಾರಸ್ವಾಮಿ ಮಧ್ಯೆ ಇದ್ದ ದೂರ ಜಾಸ್ತಿ ಆಯಿತು. ಅವರು ನನ್ನ ಮೇಲೆ ಇಲ್ಲದ ಸಲ್ಲದ ಆರೋಪ ಮಾಡಿದರು. ದೇವೇಗೌಡರನ್ನು ಸೋಲಿಸಲು ನಾನು ಮುಖ್ಯ ಕಾರಣ ಅಂದರು. ಆದರೆ ಯಾವತ್ತೂ ನಾನೂ ಅಂತಹ ಪಕ್ಷ ದ್ರೋಹ ಮಾಡಿಲ್ಲ ಎಂದು ಹೇಳಿದರು.
ನಾನು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಭಾವನಾತ್ಮಕ ಸಂಬಂಧ ಇತ್ತು. ಅವರು ಯಾರ ಮಾತು ಕೇಳಿ ನನ್ನ ಮೇಲೆ ಕ್ರಮ ಕೈಗೊಂಡರೋ ಗೊತ್ತಿಲ್ಲ. ನಾನು ಜೆಡಿಎಸ್ ಪಕ್ಷ ಬಿಡಲ್ಲ ಅಂದರೂ ಅಧಿಕೃತವಾಗಿ ಅವರನೇ ಬೇರೆ ಅಭ್ಯರ್ಥಿ ಘೋಷಣೆ ಮಾಡಿದರು. ವಿಧಾನಸಭೆಯಲ್ಲಿ ಅಡ್ಡ ಮತದಾನ ಮಾಡಿರುವ ಆರೋಪ ಮಾಡಿದರು. ಪಕ್ಷದಿಂದ ವಜಾಗೊಳಿಸಿದರು. ಇದುವರೆಗೂ ನನಗೆ ಸಹಕಾರ ಕೊಟ್ಟ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.
ಜೆಡಿಎಸ್ನಲ್ಲಿ ನಾವು ಕುಟುಂಬದ ಸದಸ್ಯರಂತೆ ಕೆಲಸ ಮಾಡಿದ್ದೇವೆ. ಎಲ್ಲರೂ ನನ್ನ ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನಪಟ್ಟರು. ಕುಮಾರಸ್ವಾಮಿ 20 ವರ್ಷ ಜೆಡಿಎಸ್ನಲ್ಲಿ ನನ್ನನ್ನು ತಮ್ಮನ ರೀತಿಯಲ್ಲಿ ನೋಡಿಕೊಂಡಿದ್ದಾರೆ. ಮಾಜಿ ಸಚಿವ ಎಚ್ಡಿ ರೇವಣ್ಣ ಅವರು ಅಭಿವೃದ್ಧಿ ಕೆಲಸಕ್ಕೆ ಸ್ಪಂದಿಸಿದ್ದಾರೆ. ನಾನು ಮಲಗಿದ್ದರೂ ಫೋನ್ ಮಾಡಿ ನಿನ್ನ ಕ್ಷೇತ್ರಕ್ಕೆ ಏನು ಬೇಕು ಎಂದು ಕೇಳಿ ಕೆಲಸ ಹಾಕಿಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು