ವಿದೇಶಿ ಅಡಿಕೆಗೆ 100 ರೂ. ಆಮದು ಸುಂಕ ಹೆಚ್ಚಿಸಿದ ಕೇಂದ್ರ
ಪುತ್ತೂರು: ವಿದೇಶಗಳಿಂದ ಆಮದಾಗುತ್ತಿದ್ದ ಅಡಿಕೆ ಕೆ.ಜಿ.ಗೆ 100 ರೂ.ನಷ್ಟು ಸುಂಕ ಹೆಚ್ಚಿಸಿದ್ದು, ಮುಂದೆ ವಿದೇಶಿ ಅಡಿಕೆಗಳಿಗೆ ಕಡಿವಾಣ ಬೀಳುವುದು ಪಕ್ಕಾ.
ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಹಳೆ ಅಡಿಕೆ 460 ರೂ.ನಿಂದ 500 ರೂವರೆಗೆ ಹಾಗೂ ಹೊಸಅಡಕೆಗೆ 400 ರೂ.ವರೆಗೆ ಧಾರಣೆ ಇದೆ.
ಮಂಗಳವಾರ ಆಮದು ಸುಂಕವನ್ನು 100 ರೂ. ಹೆಚ್ಚುವರಿಗೊಳಿಸಿ ಕೇಂದ್ರ ಸರಕಾರ ಆದೇಶ ನೀಡಿದೆ. ಈ ಮೂಲಕ ಅಡಿಕೆ ಬೆಳೆಗಾರರಿಗೆ ಶುಭಸುದ್ದಿ ನೀಡಿದೆ.
ವಿದೇಶಗಳಿಂದ ಆಮದಾಗುತ್ತಿದ್ದ ಅಡಿಕೆಗೆ 251 ರೂ. ಧಾರಣೆ ನೀಡಲಾಗುತ್ತಿತ್ತು. ಮುಂದೆ ಈ ಧಾರಣೆ 351 ರೂ.ಗೆ ಏರಲಿದೆ. ಇದಕ್ಕೆ ಶೇ. 108 ತೆರಿಗೆ ವಿಧಿಸಲಾಗುವುದು. ಅಂದರೆ ಒಟ್ಟು ಧಾರಣೆ 700 ರೂ. ಹತ್ತಿರ ಬಂದು ನಿಲ್ಲಲಿದೆ. ಆದ್ದರಿಂದ ವಿದೇಶಗಳಿಂದ ಆಮದಾಗುವ ಅಡಿಕೆ ಇನ್ನು ಮುಂದೆ ದುಬಾರಿಯಾಗಲಿದೆ. ಆದ್ದರಿಂದ ದೇಶೀಯ ಅಡಿಕೆಗೆ ಧಾರಣೆ ಹೆಚ್ಚುವ ಸಂಭವ ಹೆಚ್ಚು ಎಂದು ವಿಶ್ಲೇಷಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಅಡಿಕೆ ಮಾರುಕಟ್ಟೆ ವಿವಿಧ ಕಾರಣಗಳಿಂದ ಇಳಿಕೆ ಕಂಡಿತ್ತು. ಇದೀಗ ಆಮದು ದರ ಏರಿಕೆಯ ನಂತರ ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಹೊಸ ಚಾಲಿ ಹಾಗೂ ಹಳೆ ಎರಡರಲ್ಲೂ ಚೇತರಿಕೆ ಕಾಣುವ ನಿರೀಕ್ಷೆಯಿದೆ.