ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9.79 ಲಕ್ಷ ಹುದ್ದೆಗಳು ಖಾಲಿ; ರೈಲ್ವೆ ಇಲಾಖೆಯೊಂದರಲ್ಲೇ 2.93 ಲಕ್ಷ ಹುದ್ದೆಗಳು; ಕೇಂದ್ರ ಸಚಿವರಿಂದ ಮಾಹಿತಿ

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9.79 ಲಕ್ಷ ಹುದ್ದೆಗಳು ಖಾಲಿ; ರೈಲ್ವೆ ಇಲಾಖೆಯೊಂದರಲ್ಲೇ 2.93 ಲಕ್ಷ ಹುದ್ದೆಗಳು; ಕೇಂದ್ರ ಸಚಿವರಿಂದ ಮಾಹಿತಿ

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆ ಮತ್ತು ಸಂಸ್ಥೆಗಳಲ್ಲಿ ಮಾರ್ಚ್ 1, 2021 ರ ಅಂಕಿ - ಅಂಶದಂತೆ ಒಟ್ಟು 9.79 ಲಕ್ಷ ಹುದ್ದೆಗಳು ಖಾಲಿ ಇವೆ. ಈ ಪೈಕಿ ರೈಲ್ವೆ ಇಲಾಖೆ ಒಂದರಲ್ಲೇ ಅತ್ಯಧಿಕ ಅಂದರೆ 2.93 ಲಕ್ಷ ಹುದ್ದೆಗಳು ಖಾಲಿ ಇದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಬುಧವಾರದಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಲಾಗಿದ್ದು, ಇನ್ನುಳಿದಂತೆ ರಕ್ಷಣಾ (ಸಿವಿಲ್) 2.64 ಲಕ್ಷ, ಗೃಹ 1.43 ಲಕ್ಷ, ಅಂಚೆ ಇಲಾಖೆಯಲ್ಲಿ 90,050, ರೆವಿನ್ಯೂ ಇಲಾಖೆಯಲ್ಲಿ 80,243, ಭಾರತೀಯ ಲೆಕ್ಕ ಪರಿಶೋಧನೆ ಮತ್ತು ಖಾತೆ ವಿಭಾಗದಲ್ಲಿ 25,934 ಮತ್ತು ಪರಮಾಣು ಶಕ್ತಿ ಇಲಾಖೆಯಲ್ಲಿ 9,460 ಹುದ್ದೆಗಳು ಖಾಲಿ ಇವೆ ಎಂದು ಅವರು ತಿಳಿಸಿದ್ದಾರೆ.

ಅಗತ್ಯಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಅಲ್ಲದೆ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡುವ ಕುರಿತಂತೆ ಸರ್ಕಾರ ಎಲ್ಲಾ ಸಚಿವಾಲಯ ಹಾಗೂ ಇಲಾಖೆಗಳಿಗೆ ಈಗಾಗಲೇ ಸೂಚನೆಯನ್ನು ನೀಡಿದೆ ಎಂದು ಹೇಳಿರುವ ಸಚಿವರು, ಇದರ ಜೊತೆಗೆ ಕೇಂದ್ರ ಸರ್ಕಾರ ಆಯೋಜಿಸುತ್ತಿರುವ ಉದ್ಯೋಗ ಮೇಳಗಳಿಂದ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದು ತಿಳಿಸಿದ್ದಾರೆ.