ರೈತರಿಗೆ ಗುಡ್ ನ್ಯೂಸ್ : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ, ಜೋಳ ಖರೀದಿಗೆ ನೊಂದಣಿ ಪ್ರಕ್ರಿಯೆ ಆರಂಭ
ಬಳ್ಳಾರಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ 2022-23ನೇ ಸಾಲಿನಲ್ಲಿ ಭತ್ತ, ರಾಗಿ, ಜೋಳ ಬೆಳೆಗಳನ್ನು ರೈತರಿಂದ ನೇರವಾಗಿ ಖರೀದಿಸಲು ಡಿ.15ರಿಂದ ರೈತರ ನೊಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ರೈತರ ನೊಂದಣಿ ಪ್ರಕ್ರಿಯೆ ಡಿ.15ರಿಂದ 30ರವರೆಗೆ ನಡೆಯಲಿದೆ ಹಾಗೂ ಕೃಷಿ ಉತ್ಪನ್ನಗಳ ಖರೀದಿ ಪ್ರಕ್ರಿಯೆಯು 2023ನೇ ಜನವರಿ 1ರಿಂದ 2023ನೇ ಮಾರ್ಚ್ 31ರವರೆಗೆ ನಡೆಯಲಿದೆ. ಕೃಷಿ ಉತ್ಪನ್ನಗಳಾದ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‍ಗೆ ರೂ.2040, ಗ್ರೇಡ್ ಎ-ಭತ್ತಕ್ಕೆ ರೂ.2060, ರಾಗಿಗೆ ರೂ.3578, ಹೈಬ್ರೀಡ್-ಬಿಳಿ ಜೋಳಕ್ಕೆ ರೂ.2970, ಮಾಲ್ದಂಡಿ-ಬಿಳಿ ಜೋಳಕ್ಕೆ ರೂ.2990 ಬೆಂಬಲ ಬೆಲೆಗಳಾಗಿವೆ.
ಬೆಂಬಲ ಬೆಲೆ ಯೋಜನೆಯಡಿ ಭತ್ತÀವನ್ನು ಮಾರಾಟ ಮಾಡಲು ರೈತರು ಮೊದಲು ಕೃಷಿ ಇಲಾಖೆಯಲ್ಲಿ ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಮಾಡಿಕೊಳ್ಳಬೇಕು. ಆಯಾ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ, ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಾಲೂಕು ಕೇಂದ್ರ ಕಚೇರಿಗಳಲ್ಲಿ ತೆರೆಯಲಾಗುವ ಖರೀದಿ ಕೇಂದ್ರಗಳಲ್ಲಿ ಭತ್ತ, ರಾಗಿ, ಜೋಳ ಮಾರಾಟ ಮಾಡಲು ನೊಂದಾಯಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
*ನೊಂದಣಿ ಮತ್ತು ಖರೀದಿ ಕೇಂದ್ರಗಳ ವಿವರ: ಬಳ್ಳಾರಿಯ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ, ಕುರುಗೋಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸಿರುಗುಪ್ಪ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ, ಸಂಡೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕಂಪ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ನೊಂದಣಿ ಮತ್ತು ಖರೀದಿ ಕೇಂದ್ರಗಳಾಗಿವೆ.
*ಖರೀದಿ ಅಧಿಕಾರಿಗಳು ಮತ್ತು ಗ್ರೇಡರ್‍ಗಳು: ಬಳ್ಳಾರಿಯ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಸಹಾಯಕ ಕಾರ್ಯದರ್ಶಿ ನಾಗರಾಜ ಅವರ ಮೊ.9611334455 ಹಾಗೂ ಮೋಕಾ ಸಹಾಯಕ ಕೃಷಿ ಅಧಿಕಾರಿ ಖಾಜ ಮೊಹಿನುದ್ದೀನ್ ಅವರ ಮೊ.8277934299, ಕುರುಗೋಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಹುಸೇನ್ ಸಾಬ್ ಅವರ ಮೊ.8951307333, ಕೃಷಿ ಅಧಿಕಾರಿ ದೇವರಾಜ.ಎಂ ಅವರ ಮೊ.8277934300, ಸಿರುಗುಪ್ಪ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ಶಾಂತನಗೌಡ ಅವರ ಮೊ.9108800969 ಹಾಗೂ ಹಚ್ಚೋಳ್ಳಿಯ ಕೃಷಿ ಅಧಿಕಾರಿ ಬಾಲಾಜಿ ನಾಯಕ್.ಎಂ ಅವರ ಮೊ.8277928176, ಸಂಡೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಶಿವಲಿಂಗಪ್ಪ ಅವರ ಮೊ.9980676497, ಕೃಷಿ ಅಧಿಕಾರಿ ರಾಘವೇಂದ್ರ ಅವರ ಮೊ.8277930434, ಕಂಪ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಆಂಜಿನೇಯಲು ಮೊ.9448717434, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಮಡಿವಾಳರ ಎ.ಎಸ್.ಅವರ ಮೊ.9481080998 ಅವರನ್ನು ಸಂಪರ್ಕಿಬಹುದಾಗಿದೆ.
ಸೂಚನೆಗಳು: ಎಲ್ಲಾ ಹೋಬಳಿ ಮಟ್ಟದ ಖರೀದಿ ಕೇಂದ್ರಗಳಲ್ಲಿ ಆನ್‍ಲೈನ್ ಮುಖಾಂತರ ರೈತರ ನೊಂದಣಿಯನ್ನು ಮಾಡಲಾಗುವುದು. ಖರೀದಿ ಕೇಂದ್ರಕ್ಕೆ ರೈತರು ಕೃಷಿ ಇಲಾಖೆಯಿಂದ ಪಡೆದಿರುವ ಅವರ ಫ್ರೂಟ್ಸ್ ಐ.ಡಿ. (ರೈತರ ನೊಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ಮತ್ತು ಆಧಾರ್‍ನೊಂದಿಗೆ ನೊಂದಣಿ ಕೇಂದ್ರಕ್ಕೆ ಬರಬೇಕು. ಬೆಂಬಲ ಬೆಲೆಗಾಗಿ ರೈತರನ್ನು ಪ್ರತ್ಯೇಕವಾಗಿ ನೊಂದಾಯಿಸದೇ ಕೇವಲ ಅವರ ಫ್ರೂಟ್ಸ್ ಐ.ಡಿ.ಯ ಮೂಲಕ ಖರೀದಿಗೆ ನೊಂದಾಯಿಸಲಾಗುವುದು. ರೈತರ ಫ್ರೂಟ್ಸ್ ಐ.ಡಿ ಯನ್ನು (ಉದಾ: ಎಫ್.ಐಡಿ 2205000013125) ಈ ಸಾಲಿನಲ್ಲಿ ರೈತರಿಂದ ಫ್ರೂಟ್ಸ್ ಐ.ಡಿ ಪಡೆಯುವುದು ಕಡ್ಡಾಯ. ರೈತರ ಬಳಿ ಫ್ರೂಟ್ಸ್ ಐ.ಡಿ ಇಲ್ಲದಿದ್ದಲ್ಲಿ ಅಥವಾ ಅವರ ಫ್ರೂಟ್ಸ್ ಐ.ಡಿ ಮಾಹಿತಿ ಪರಿಷ್ಕರಿಸಲು ಕೃಷಿ ಇಲಾಖೆಯನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬೇಕು.
ಪ್ರತಿಯೊಬ್ಬ ರೈತರ ಫ್ರೂಟ್ಸ್ ಐ.ಡಿ. ನಮೂದಿಸಿದ ನಂತರ ಫ್ರೂಟ್ಸ್ ದತ್ತಾಂಶದಿಂದ ರೈತರ ಅಗತ್ಯ ಮಾಹಿತಿ ಲಭ್ಯವಾಗಲಿದೆ. ಮಾಹಿತಿಯಲ್ಲಿ ರೈತರ ಹೆಸರು, ವಿಳಾಸ, ಜಾತಿ, ವಯಸ್ಸು, ಮೊಬೈಲ್ ಸಂಖ್ಯೆ, ಜಮೀನು ಮತ್ತು ಬೆಳೆದಿರುವ ಬೆಳೆಯ ವಿವರಗಳು ಹಾಗೂ ರೈತರ ಬ್ಯಾಂಕ್ ಖಾತೆಯ ವಿವರಗಳು ಲಭ್ಯವಿರುತ್ತವೆÉ. ಹಾಗಾಗಿ ಪ್ರತ್ಯೇಕವಾಗಿ ಬೇರೆ ಯಾವುದೇ ದಾಖಲೆ ನೀಡುವ ಅವಶ್ಯಕತೆ ಇಲ್ಲಾ. ಫ್ರೂಟ್ಸ್ ದತ್ತಾಂಶದನ್ವಯ ರೈತರ ಬೆಳೆ ಸಮೀಕ್ಷೆ ವಿವರದಂತೆ ಬೆಳೆ ವಿಸ್ತೀರ್ಣಕ್ಕನುಗುಣವಾಗಿ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬಹುದಾದ ಗರಿಷ್ಠ ಪ್ರಮಾಣವನ್ನು ನಿಗದಿಪಡಿಸಲಾಗುತ್ತದೆ.